ತಿರುವನಂತಪುರಂ : ಕೇರಳದಲ್ಲಿನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ 'ಗುಪ್ತ ಹೊಂದಾಣಿಕೆ' ನಡೆದಿರುವಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಇದುವರೆಗೂ ದೂರು ದಾಖಲಾಗದೆ ಇರುವುದು ಇದೇ ಕಾರಣಕ್ಕೆ ಇರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೋಮವಾರ ಹೇಳಿದ್ದಾರೆ.
ತಿರುವನಂತಪುರಂನಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ, 'ಕೇರಳ ಮುಖ್ಯಮಂತ್ರಿ ಮತ್ತು ಪ್ರಧಾನಿ ನಡುವೆ ರಹಸ್ಯ ಹೊಂದಾಣಿಕೆ ನಡೆದಿರುವಂತೆ ಕಾಣಿಸುತ್ತಿದೆ.ಅದಾನಿ ಸಮೂಹದಿಂದ 8,700 ಕೋಟಿ ರೂಪಾಯಿಗೆ 25 ವರ್ಷದ ಅವಧಿಗೆ 300 ಮೆಗಾವ್ಯಾಟ್ ಪವನ ಶಕ್ತಿಯನ್ನು ಖರೀದಿಸುವ ನಿರ್ಧಾರವು ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿಯೇ ನಡೆದಿದೆಯೇ? ಇ.ಡಿ ಮತ್ತು ಆದಾಯ ತೆರಿಗೆ ಇದುವರೆಗೂ ಸಿಎಂ ಹಾಗೂ ಇತರೆ ಮಂತ್ರಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸದೆ ಇರುವುದು ಈ ಹೊಂದಾಣಿಕೆಯ ಭಾಗವೇ?' ಎಂದು ಪ್ರಶ್ನಿಸಿದರು.
'ಕೇರಳದಲ್ಲಿ ಸಿಪಿಎಂ ಮತ್ತು ಕೇರಳ ನಡುವೆ ಇರುವ ರಹಸ್ಯ ಹೊಂದಾಣಿಕೆ ಏನು? ಸಿಎಂ ವಿಜಯನ್ ಮತ್ತು ಮೋದಿ ನಡುವೆ ಯಾವ ಡೀಲ್ ನಡೆದಿದೆ? ಅದಾನಿ ಸಮೂಹದಿಂದ 8,700 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ 25 ವರ್ಷಗಳವರೆಗೆ 2.85 ರೂಪಾಯಿ ಮತ್ತು 2.90 ರೂಪಾಯಿಗೆ 300 ಮೆಗಾವ್ಯಾಟ್ ಪವನ ವಿದ್ಯುತ್ತನ್ನು ಕೇರಳ ಸರ್ಕಾರ ಖರೀದಿಸಿರುವುದು ಇದಕ್ಕಾಗಿಯೇ ಎಂಬುದು ಸರಿಯೇ?' ಎಂದು ಹೇಳಿದರು.
'ಸೌರ ವಿದ್ಯುತ್ ಒಂದು ಯುನಿಟ್‌ಗೆ 1.90 ರೂ. ದರದಲ್ಲಿ ಲಭ್ಯವಿದ್ದರೆ ಈ ವಿದ್ಯುತ್ ಒಂದು ರೂಪಾಯಿ ಹೆಚ್ಚಿನ ದರದಲ್ಲಿ 2.90 ರೂ.ದಂತೆ ಲಭ್ಯವಾಗುತ್ತಿರುವುದು ಸರಿಯಲ್ಲ. ಕೇರಳದ ಪಾಲಿನ ಒಟ್ಟಾರೆ ಸೌರ ವಿದ್ಯುತ್ ಕೋಟಾವನ್ನು ಮೋದಿ ಮತ್ತು ಪಿಣರಾಯಿ ಸೇರಿ ಶೇ 2.75 ರಿಂದ ಶೇ 0.75ಕ್ಕೆ ಇಳಿಸಿದ್ದಾರೆ. ಕೇರಳಕ್ಕೆ ಪ್ರತಿ ಯುನಿಟ್‌ಗೆ 1.90ರ ದರದಲ್ಲಿ ಕಡಿಮೆ ವೆಚ್ಚದಲ್ಲಿಯೇ ವಿದ್ಯುತ್ ಲಾಭ ಸಿಗಬಹುದಿತ್ತು' ಎಂದು ಅವರು ಆರೋಪಿಸಿದರು.