ನವದೆಹಲಿ: ಮತಪತ್ರ ಮತ್ತು ಇವಿಎಂಗಳಲ್ಲಿರುವ ಪಕ್ಷಗಳ ಚಿಹ್ನೆ ಬದಲಿಗೆ ಅಭ್ಯರ್ಥಿಗಳ ಹೆಸರು, ವಯಸ್ಸು, ವಿದ್ಯಾರ್ಹತೆ ಮತ್ತು ಭಾವಚಿತ್ರ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಂದ ಅಭಿಪ್ರಾಯ ಸಂಗ್ರಹಕ್ಕೆ ಪ್ರಯತ್ನಿಸಿದೆ.
ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ಯಾವುದೇ ಔಪಚಾರಿಕ ನೋಟಿಸ್ ನೀಡದೆ, ಅರ್ಜಿದಾರ ಅಶ್ವಿನ್ ಉಪಾಧ್ಯಾಯ ಅವರಿಗೇ, ತಮ್ಮ ಅರ್ಜಿಯ ಒಂದು ಪ್ರತಿಯನ್ನು ಅಟಾರ್ನಿ ಜನರಲ್(ಎಜಿ) ಕೆ.ಕೆ.ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರಿಗೆ ನೀಡುವಂತೆ ತಿಳಿಸಿದೆ.
'ಈ ಸಂದರ್ಭದಲ್ಲಿ ನಾವು ಯಾವುದೇ ನೋಟಿಸ್ ನೀಡುವುದಿಲ್ಲ. ಅರ್ಜಿಯ ಒಂದು ಪ್ರತಿಯನ್ನು ಕೇಂದ್ರದ ಎಜಿ ಮತ್ತು ಎಸ್‌ಜಿ ಅವರಿಗೆ ನೀವೇ ತಲುಪಿಸಿ' ಎಂದು ಸೂಚಿಸಿದ ಪೀಠ, ಈ ಅರ್ಜಿಯ ವಿಚಾರಣೆಯನ್ನು ಮುಂದಿನವಾರಕ್ಕೆ ನಿಗದಿಪಡಿಸಿದೆ.
ಅರ್ಜಿ ವಿಚಾರಣೆಯ ವೇಳೆ, ನ್ಯಾಯಪೀಠವು ವಿದ್ಯುನ್ಮಾನ ಮತ ಯಂತ್ರಗಳಲ್ಲಿರುವ (ಇವಿಎಂ) ಚುನಾವಣಾ ಚಿಹ್ನೆಗೆ ಆಕ್ಷೇಪಣೆ ಮಾಡಲು ಕಾರಣವೇನು ಎಂದು ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ವಿಕಾಸ್ ಸಿಂಗ್, 'ನಮ್ಮ ಅರ್ಜಿದಾರರು ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ಹೇಳಿದ್ದಾರೆ.