HEALTH TIPS

ಆಹಾರ ಭದ್ರತೆ... ದಾರಿ ಬಹಳ ದೂರ

         ಭಾರತದ ಅಪೌಷ್ಟಿಕ ಆಹಾರ ಮಟ್ಟಗಳು ಹಲವು ಆಫ್ರಿಕನ್ ದೇಶಗಳ ಮಟ್ಟಗಳ ಬಹುತೇಕ ಎರಡುಪಟ್ಟಿನಷ್ಟು ಇವೆ. 2020ರ ಜಾಗತಿಕ ಹಸಿವು ಸೂಚ್ಯಂಕ ವರದಿಯು 37 ದೇಶಗಳ ಪೈಕಿ ಭಾರತಕ್ಕೆ 94ನೇ ಸ್ಥಾನ ನೀಡಿದೆ. ಇದು ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನೇಪಾಳಕ್ಕಿಂತ ಕೆಳಗಿನ ಸ್ಥಾನವಾಗಿದೆ. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಭಾರತದಲ್ಲಿ ಪ್ರತಿನಿತ್ಯ 194ಮಿಲಿಯ ಮಂದಿ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಇದು ವಿಶ್ವದಲ್ಲಿ ಆಹಾರದ ಕೊರತೆಯಿಂದ ಬಳಲುವ ಒಟ್ಟು ಜನಸಂಖ್ಯೆಯ ಶೇ. 23ರಷ್ಟು ಆಗುತ್ತದೆ.


        ಸ್ವಾತಂತ್ರ್ಯ ಬಂದು 73ವರ್ಷಗಳ ಬಳಿಕ ಕೂಡ ಸಾಕಷ್ಟು ಕೃಷಿ ಉತ್ಪನ್ನ ಇರುವಾಗಲೂ ಆಹಾರ ಭದ್ರತೆ ಇಲ್ಲದಿರುವುದು ಒಂದು ಗಂಭೀರ ಸೋಲು ಎನ್ನಬೇಕಾಗುತ್ತದೆ. ಯಾಕೆಂದರೆ ಭಾರತವು ಸಮಸ್ತ ಜನಸಂಖ್ಯೆಗೆ ಬೇಕಾಗುವುದಕ್ಕಿಂತ ಹೆಚ್ಚು ಆಹಾರವನ್ನು ಉತ್ಪಾದಿಸುತ್ತದೆ (2018-19ರಲ್ಲಿ ಭಾರತ 283.37 ಮಿಲಿಯ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಿತ್ತು).

          ಅದೇನಿದ್ದರೂ, ಬಳಕೆದಾರ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ 2011 ಮತ್ತು 2017ರ ನಡುವಿನ ಅವಧಿಯಲ್ಲಿ ಭಾರತದ ಆಹಾರ ನಿಗಮ ಮಳಿಗೆಗಳಲ್ಲಿ 62,000 ಟನ್‌ಗಳಷ್ಟು ಆಹಾರ ಧಾನ್ಯಗಳು ಹಾನಿಗೊಳಗಾಗಿ ವ್ಯರ್ಥವಾಗಿ ಹೋದವು. 2016-17ರ ಒಂದೇ ವರ್ಷದಲ್ಲಿ ಹೀಗೆ 8,600 ಟನ್‌ಗಳಿಗೂ ಹೆಚ್ಚು ಆಹಾರ ಧಾನ್ಯಗಳನ್ನು ನಾವು ಕಳೆದುಕೊಂಡಿದ್ದೇವೆ. ಒಂದು ವರದಿಯ ಪ್ರಕಾರ ಮಿಲಿಯಗಟ್ಟಲೆ ಖೋಟಾ ಪಡಿತರ ಚೀಟಿಗಳು ಅನರ್ಹರಿಗೆ ಪಡಿತರ ಒದಗಿಸುತ್ತಿರುವಾಗ, ಇನ್ನೊಂದೆಡೆ ನಿಜವಾಗಿಯೂ ಬಡತನದಿಂದ ಬಳಲುವ ಸಾವಿರಾರು ಕುಟುಂಬಗಳ ಬಳಿ ಪಡಿತರ ಚೀಟಿ ಕೂಡ ಇಲ್ಲವಾಗಿದೆ. ಈ ದತ್ತಾಂಶಗಳು ಭಾರತದಲ್ಲಿರುವ ಕಳಪೆ ಆಹಾರ ನಿರ್ವಹಣೆ ವ್ಯವಸ್ಥೆಯನ್ನು ಬಯಲುಗೊಳಿಸುತ್ತದೆ.

       ಭಾರತದ ಆಹಾರ ಭದ್ರತೆ ಸಾಧ್ಯವಾಗಬೇಕಾದರೆ ಎರಡು ಅಂಶಗಳುಳ್ಳ ನೀತಿಯೊಂದರ ಅಗತ್ಯವಿದೆ. ಮೊದಲನೆಯದಾಗಿ, ಆಹಾರೋತ್ಪನ್ನಗಳಿಗೆ ಸೂಕ್ತವಾದ ಬೆಲೆ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ಇದಕ್ಕಾಗಿ ಗರಿಷ್ಠ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯ ಆಹಾರೋತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕುವಂತಾಗಬೇಕು. ಎರಡನೆಯದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಮುಕ್ತ ಬೆಳೆ ಖರೀದಿ ವ್ಯವಸ್ಥೆಯನ್ನು ಉತ್ತಮಪಡಿಸುವುದು ತೀರಾ ಅವಶ್ಯಕ.

       ಅನ್ನಪೂರ್ಣ ಯೋಜನೆಯನ್ನು ಪರಿಷ್ಕರಿಸಿ ಪುನರ್ ರೂಪಿಸುವ ಮೂಲಕ ದೇಶದ ಆಹಾರ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸಬಹುದು. ಈಗ ಈ ಯೋಜನೆಯಡಿಯಲ್ಲಿ ಅರವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ನಿರ್ಗತಿಕರಿಗೆ ತಿಂಗಳೊಂದರ ಹತ್ತು ಕಿಲೋ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಡಿಯಲ್ಲಿ ಸರಕಾರ ಶೇ. 20 ಮಂದಿಯನ್ನು ಈ ಯೋಜನೆಯ ಗುರಿಯಾಗಿ ನಿಗದಿಪಡಿಸಿದೆ. ಇಂತಹ ಪಿಂಚಣಿ ಪಡೆಯದವರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಆದರೆ ಕೇರಳದಲ್ಲಿ ಈ ವರ್ಗದ ಬಹುತೇಕ ಮಂದಿ ಸಾಮಾಜಿಕ ಭದ್ರತಾ ಯೋಜನೆಗೆ ಒಳಪಟ್ಟಿದ್ದಾರೆ. ಹೀಗಾಗಿ ಅಲ್ಲಿ ಹೆಚ್ಚಿನ ಮಂದಿ ಅನ್ನಪೂರ್ಣ ಯೋಜನೆಯಿಂದ ಹೊರಗುಳಿದಿದ್ದಾರೆ. ಈ ಸಮಸ್ಯೆಯತ್ತ ಸರಕಾರ ತುರ್ತಾಗಿ ಗಮನ ಹರಿಸಬೇಕಾಗಿದೆ.

ಅಲ್ಲದೆ, ಗ್ಲೋಬಲ್ ಪಲ್ಸ್ ಕಾನ್ಫೆಡರೇಶನ್ ಹೇಳುವ ಪ್ರಕಾರ ದ್ವಿದಳ ಧಾನ್ಯಗಳು ಆರೋಗ್ಯಪೂರ್ಣ ಸಮತೂಕದ ಆಹಾರದ ಅವಿಭಾಜ್ಯ ಅಂಗ ಮತ್ತು ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಅವುಗಳು ಪ್ರಮುಖ ಪಾತ್ರವಹಿಸುತ್ತವೆ. ವಿಶ್ವ ಆರೋಗ್ಯ ಕಾರ್ಯಕ್ರಮವು ಅದರ ಆಹಾರದ ತಟ್ಟೆಯಲ್ಲಿ ಇತರ ಆಹಾರ ವಸ್ತುಗಳ ಜೊತೆಗೆ 60 ಗ್ರಾಂ ದ್ವಿದಳ ಧಾನ್ಯಗಳನ್ನು ಸೇರಿಸಿದೆ. ಆಹಾರ, ಗ್ರಾಹಕರ ವ್ಯವಹಾರ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ವರದಿ ಹೇಳುವಂತೆ, ''ಸಸ್ಯಾಹಾರಿ ಸಮಾಜವೊಂದರಲ್ಲಿ ಸಸಾರಜನಕ ಆಹಾರ ಪದಾರ್ಥಗಳ ಕಡೆಗೆ ಜನರು ತಮ್ಮ ಒಲವು ವ್ಯಕ್ತಪಡಿಸುತ್ತಿರುವಾಗ ದ್ವಿದಳ ಧಾನ್ಯಗಳ ಬಳಕೆ ಹೆಚ್ಚುತ್ತಿದೆ. ಆದರೆ ಇದಕ್ಕನುಗುಣವಾಗಿ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಏರಿಕೆಯಾಗಿಲ್ಲ... ಆದರೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಸತತವಾಗಿ ಏರಿಕೆಯಾಗಿರುವುದರಿಂದ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ ಕಂಡುಬಂದಿದೆ.'' ಆದ್ದರಿಂದ ನಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ದ್ವಿದಳ ಧಾನ್ಯಗಳನ್ನು ಕೂಡ ಸೇರಿಸಲು ಇದು ಸಕಾಲವಾಗಿದೆ.

              ಕೃಪೆ: TheHindu:(ರಾಜಮೋಹನ್ ಉಣ್ಣಿತ್ತಾನ್ ಸಂಸತ್ ಸದಸ್ಯರು ಹಾಗೂ ಆಹಾರ, ಬಳಕೆದಾರರ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಸದಸ್ಯರು


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries