ಪಾಲಕ್ಕಾಡ್: ತಮಿಳುನಾಡಿನಲ್ಲೂ ಮತ್ತೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ತಮಿಳುನಾಡು ಸರ್ಕಾರ ಕೇರಳದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದೆ.
ಮಂಗಳವಾರ ಮಧ್ಯಾಹ್ನದಿಂದ ಕೇರಳ ಗಡಿಯ ವಲಯಾರ್‌ನಲ್ಲಿ ವಾಹನ ತಪಾಸಣೆ ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ತಮಿಳುನಾಡು ಸರ್ಕಾರ ಕೈಗೊಂಡಿದೆ.
ಕೇರಳದಿಂದ ಬರುವ ಪ್ರಯಾಣಿಕರಿಗೆ 72 ಗಂಟೆಗಳ ಒಳಗೆ ತೆಗೆದುಕೊಂಡ ಆರ್‌ಟಿ ಪಿಸಿಆರ್ ಪರೀಕ್ಷಾ ಮಾಡಿಸಿದ ಕೊರೋನಾ ನೆಗಟಿವ್ ಪ್ರಮಾಣಪತ್ರಗಳನ್ನು ತಮಿಳುನಾಡು ಸರ್ಕಾರ ಕಡ್ಡಾಯಗೊಳಿಸಿದೆ. ಆದರೂ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ.
ಸರಕು ವಾಹನಗಳ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಪರಿಶೀಲಿಸಲಾಗುತ್ತಿದೆ. ಆದರೆ, ತಮಿಳುನಾಡಿನಿಂದ ಕೇರಳಕ್ಕೆ ಪ್ರವೇಶಿಸುವ ವಾಹನಗಳ ಜನರು ಮತ್ತು ಸಿಬ್ಬಂದಿಗೆ ಯಾವುದೇ ನಿರ್ಬಂಧಗಳಿಲ್ಲ.
ಈ ಸಂಬಂಧ ಕೊಯಮತ್ತೂರು ಜಿಲ್ಲಾಧಿಕಾರಿ ಕೆ ರಾಜಮಣಿ ಅವರು ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಇತರ ರಾಜ್ಯಗಳಿಂದ(ಕರ್ನಾಟಕ, ಆಂಧ್ರಪ್ರದೇಶ ಮತ್ತು ಪುದುಚೇರಿ ಹೊರತುಪಡಿಸಿ) ಮತ್ತು ವಿದೇಶಗಳಿಂದ ತಮಿಳುನಾಡಿಗೆ ಬರುವ ಪ್ರಯಾಣಿಕರಿಗೆ ಟಿಎನ್ ಇ-ಪಾಸ್ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಪ್ರಯಾಣಿಕರು/ಸಂದರ್ಶಕರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕೋವಿಡ್-19 RT-PCR ನೆಗಟಿವ್ ವರದಿ ಹೊಂದಿರಬೇಕು ಎಂದು ಹೇಳಿದ್ದಾರೆ.