ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೊ ಬೈಡನ್ ರ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ಅಮೆರಿಕದ ವೈದ್ಯ ವಿವೇಕ್ ಮೂರ್ತಿ ನೇಮಕವನ್ನು ಅಮೆರಿಕ ಸೆನೆಟ್ ದೃಢಪಡಿಸಿದೆ.57-43ರ ಮತಗಳೊಂದಿಗೆ ವಿವೇಕ್ ಮೂರ್ತಿಯವರ ನೇಮಕವಾಗಿದೆ.
ಅಮೆರಿಕವನ್ನು ಕೋವಿಡ್-19 ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡಿದ್ದು ಈ ಸಂದರ್ಭದಲ್ಲಿ ವಿವೇಕ್ ಮೂರ್ತಿಯವರಿಗೆ ಸರ್ಕಾರ ಬಹಳ ಮುಖ್ಯ ಜವಾಬ್ದಾರಿ ನೀಡಿದೆ. 43 ವರ್ಷದ ಡಾ ಮೂರ್ತಿಯವರು ಎರಡನೇ ಬಾರಿಗೆ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕಗೊಳ್ಳುತ್ತಿದ್ದಾರೆ.
2011 ರಲ್ಲಿ, ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು, ಆರೋಗ್ಯ ಪ್ರಚಾರ ಮತ್ತು ಸಮಗ್ರ ಮತ್ತು ಸಾರ್ವಜನಿಕ ಆರೋಗ್ಯದ ಸಲಹಾ ಗುಂಪಿನಲ್ಲಿ ಸೇವೆ ಸಲ್ಲಿಸಲು ವಿವೇಕ್ ಮೂರ್ತಿಯವರನ್ನು ನೇಮಕ ಮಾಡಿದ್ದರು.
ಅಮೆರಿಕ ಅಧ್ಯಕ್ಷರ ಸರ್ಜನ್ ಜನರಲ್ ಆಗಿ ಮತ್ತೊಮ್ಮೆ ಸೇವೆ ಸಲ್ಲಿಸಲು ಸೆನೆಟ್ ಅವಕಾಶ ನೀಡಿದ್ದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಕಳೆದ ವರ್ಷ ನಾವು ರಾಷ್ಟ್ರದಲ್ಲಿ ಬಹಳ ಕಷ್ಟಗಳನ್ನು ಸಹಿಸಿಕೊಂಡಿದ್ದೇವೆ, ರಾಷ್ಟ್ರವನ್ನು ಕೊರೋನಾ ಮುಕ್ತ ಮಾಡಲು ಮತ್ತು ಭವಿಷ್ಯದಲ್ಲಿ ಉತ್ತಮ ಆರೋಗ್ಯಕರ ಮಕ್ಕಳನ್ನು ಸೃಷ್ಟಿಸಲು ಸಹಾಯ ಮಾಡಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ ಎಂದು ಡಾ ವಿವೇಕ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.
2013ರಲ್ಲಿ ಡಾ ವಿವೇಕ್ ಮೂರ್ತಿ ಅವರನ್ನು ಬರಾಕ್ ಒಬಾಮಾ ಸರ್ಜನ್ ಜನರಲ್ ಆಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಎರಡನೇ ಬಾರಿ ಅದೃಷ್ಟ ಒಲಿದುಬಂದಿದೆ.