ಮಂಡ್ಯ ; ಕೇರಳ ಸರ್ಕಾರ ಪಡಿತರ ಯೋಜನೆಯಡಿ ಮಂಡ್ಯದ ಬೆಲ್ಲವನ್ನು ವಿತರಣೆ ಮಾಡುತ್ತಿತ್ತು. ಆದರೆ, ಬೆಲ್ಲ ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿರಸ್ಕರಿಸಿದೆ. ಮಂಡ್ಯದ ಬೆಲ್ಲ ಖರೀದಿಯನ್ನು ನಿಲ್ಲಿಸಿದ 2ನೇ ರಾಜ್ಯ ಕೇರಳವಾಗಿದೆ.
'ಮಂಡ್ಯ ಬೆಲ್ಲ' ಎಂಬ ಬ್ರಾಂಡ್‌ನಲ್ಲಿಯೇ ಎಪಿಎಂಸಿ ವರ್ತಕರು ಕೇರಳಕ್ಕೆ ಬೆಲ್ಲವನ್ನು ಕಳಿಸುತ್ತಿದ್ದರು. ಇದುವರೆಗೂ ಸುಮಾರು 20 ಸಾವಿರ ಟನ್ ಬೆಲ್ಲವನ್ನು ಮಾರಾಟ ಮಾಡಲಾಗಿದೆ. ಈಗ ಕೇರಳ ಸರ್ಕಾರ ಮಂಡ್ಯದ ಬೆಲ್ಲ ಖರೀದಿಯನ್ನು ಸ್ಥಗಿತ ಮಾಡಿದೆ.
ಬೆಲ್ಲದ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕ ಮತ್ತು ಸಕ್ಕರೆ ಬಳಕೆ ಮಾಡಲಾಗಿದೆ ಎಂಬ ಕಾರಣ ನೀಡಿ ಖರೀದಿಯನ್ನು ನಿಲ್ಲಿಸಲಾಗಿದೆ. ಈ ಹಿಂದೆ ಗುಜರಾತ್ ರಾಜ್ಯ ಸಹ ಮಂಡ್ಯದ ಬೆಲ್ಲದ ಖರೀದಿಯನ್ನು ಸ್ಥಗಿತಗೊಳಿಸಿತ್ತು.
ಮಂಡ್ಯದ ಎಪಿಎಂಸಿ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಕಳಪೆ ಬೆಲ್ಲಪತ್ತೆಯಾಗಿದೆ. ಕಳಪೆ ಬೆಲ್ಲವನ್ನು ತಯಾರು ಮಾಡುತ್ತಿದ್ದ ಆಲೆಮನೆ, ಮಾರಾಟ ಮಾಡುತ್ತಿದ್ದ ಟ್ರೇಡರ್ಸ್‌ಗಳ ಮೇಲೂ ದಾಳಿ ನಡೆದಿದೆ.
ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕಳಪೆ ಬೆಲ್ಲವನ್ನು ತರಿಸಿ, ಅದಕ್ಕೆ ಸಕ್ಕರೆ, ರಾಸಾಯನಿಕ ಸೇರಿಸಿ ಪುನರ್ ಉತ್ಪಾದನೆ ಮಾಡಿ 'ಮಂಡ್ಯ ಬೆಲ್ಲ' ಬ್ರಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಆರೋಪವಾಗಿದೆ.
'ಒಂದು ಜಿಲ್ಲೆ ಒಂದು ಉತ್ಪನ್ನ'ದ ಅಡಿ ಮಂಡ್ಯ ಬೆಲ್ಲವನ್ನು ಆಯ್ಕೆ ಮಾಡಲಾಗಿದೆ. ಆದರೆ, ಕೆಲವರು ಕಳಪೆ ಬೆಲ್ಲವನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿದ್ದರಿಂದ ಬ್ರಾಂಡ್‌ನ ಹೆಸರಿಗೆ ತೊಂದರೆಯಾಗಿದೆ.