ಲಖನೌ (ಉತ್ತರ ಪ್ರದೇಶ): ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸೋಮವಾರ ತಿಳಿಸಿದ್ದಾರೆ.
ಬಿಎಸ್‌ಪಿ ಪಕ್ಷದ ಸಂಸ್ಥಾಪಕ ಕಾನ್ಶಿ ರಾಮ್ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆ ನಡೆಯುವ ಈ ನಾಲ್ಕು ರಾಜ್ಯಗಳಲ್ಲಿ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಇತರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ದಲಿತರು, ಶೋಷಿತರು, ಬುಡಕಟ್ಟು ಜನರು, ಹಿಂದುಳಿದ ವರ್ಗ, ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ನಮ್ಮ ಪಕ್ಷ ಶ್ರಮಿಸಲಿದೆ ಎಂದರು.
ಅವರು ಚುನಾವಣೆ ಸಭೆಗಳಲ್ಲಿ ಮಾತ್ರ ಕಾನ್ಶಿ ರಾಮ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಬಿಜೆಪಿ ಮತ್ತು ಇತರೆ ಪಕ್ಷಗಳನ್ನು ಕುಟುಕಿದರು.
ಎಲ್ಲಿಯವರೆಗೂ ಜಾತಿವಾದಿ ಮತ್ತು ಬಂಡವಾಳಶಾಹಿ ಸರ್ಕಾರಗಳು ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತವೆಯೋ ಅಲ್ಲಿಯವರೆಗೂ ನಮ್ಮ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯಾಗದು ಎಂದು ಅವರು ಹೇಳಿದರು.
ನಾಲ್ಕು ರಾಜ್ಯಗಳ ಪಕ್ಷದ ನಾಯಕರು ತಮ್ಮ ಸ್ವಂತ ಶಕ್ತಿಯಿಂದ ಚುನಾವಣೆ ಎದುರಿಸಿ, ಸಕಾರಾತ್ಮಕ ಫಲಿತಾಂಶ ನೀಡಬೇಕು ಎಂದು ಅವರು ಮನವಿ ಮಾಡಿದರು.