ತಿರುವನಂತಪುರಂ: ಪಕ್ಷದ ಎರಡು ಎಲೆಯ ಚಿಹ್ನೆ ಸಂಬಂಧ ಕೇರಳ ಕಾಂಗ್ರೆಸ್ ಹಿರಿಯ ನಾಯಕ ಪಿ.ಜೆ.ಜೋಸೆಫ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಜೋಸ್ ಕೆ. ಮಣಿ ನೇತೃತ್ವದ ಕಾಂಗ್ರೆಸ್ (ಎಂ) ಪಕ್ಷಕ್ಕೆ ಈ ಎರಡೆಲೆ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದೆ.
ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್ (ಎಂ) ಪಕ್ಷಕ್ಕೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆ ನೀಡಿದ್ದು, ಇದಕ್ಕೆ ಜೋಸೆಫ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಪಕ್ಷದ ಚಿಹ್ನೆಯ ವಿವಾದದಲ್ಲಿ ತೀರ್ಪು ನೀಡುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಕಾಂಗ್ರೆಸ್ (ಎಂ) ಪಕ್ಷದ ಸಂಸ್ಥಾಪಕ ಕೆ.ಎಂ. ಮಣಿ ಅವರ ನಿಧನದ ನಂತರ ಕಾಂಗ್ರೆಸ್ ನಾಯಕ ಜೋಸೆಫ್ ಹಾಗೂ ಜೋಸ್.ಕೆ. ಮಾಣಿ ನಡುವೆ ವೈಮನಸ್ಸು ಉಂಟಾಗಿತ್ತು. ಆನಂತರ ಮಣಿಅವರ ಪಕ್ಷಕ್ಕೆ ಎರಡೆಲೆ ಚಿಹ್ನೆ ನೀಡಿದ್ದರ ವಿರುದ್ಧ ಜೋಸೆಫ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಈ ಅರ್ಜಿ ನಿರಾಕರಿಸಿದ್ದರು. ಆನಂತರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
450 ಸದಸ್ಯರಿರುವ ರಾಜ್ಯ ಸಮಿತಿಯಲ್ಲಿ 255 ಸದಸ್ಯರ ಬೆಂಬಲ ನಮಗಿದೆ. ದಾಖಲೆಗಳನ್ನು ಪರಿಶೀಲಿಸದೇ ಚುನಾವಣಾ ಆಯೋಗ ಜೋಸ್.ಕೆ. ಮಣಿ ಅವರ ಪರ ತೀರ್ಪು ನೀಡಿದೆ ಎಂದು ಆರೋಪಿಸಿದ್ದರು.
ಸೋಮವಾರ ಅರ್ಜಿ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ. "ಚುನಾವಣಾ ಚಿಹ್ನೆ ನೀಡುವ ಅಧಿಕಾರ ಚುನಾವಣಾ ಆಯೋಗದ್ದು. ಹೈಕೋರ್ಟ್ ತೀರ್ಪಿನ ಬಗ್ಗೆ ಮಧ್ಯೆ ಪ್ರವೇಶಿಸುವುದಿಲ್ಲ" ಎಂದು ತಿಳಿಸಿದೆ.