ನವದೆಹಲಿ: ವಿಶ್ವದ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಮಹಿಳೆಯರ ಸಾಧನೆಗಳನ್ನು ವಿಶೇಷ ವಿಡಿಯೊ ಡೂಡಲ್ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಗೂಗಲ್ ಆಚರಿಸಿದೆ.
ವಿಡಿಯೊ ಡೂಡಲ್ ನಲ್ಲಿ ಮಹಿಳಾ ಮುಂಚೂಣಿಯವರನ್ನು ಉಲ್ಲೇಖಿಸಿ ಶಿಕ್ಷಣ, ನಾಗರಿಕ ಹಕ್ಕುಗಳು, ವಿಜ್ಞಾನ, ಕಲೆ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳನ್ನು ತೋರಿಸಲಾಗಿದೆ.
ತಲೆಮಾರುಗಳಿಂದ ಮಹಿಳೆಯರಿಗೆ ಬಾಗಿಲು ತೆರೆದಿರುವ ಕೈಗಳನ್ನು ಚಿತ್ರಿಸುವ ಮೂಲಕ ಡೂಡಲ್ ಮಹಿಳೆಯರಿಗೆ ಗೌರವ ಸಲ್ಲಿಸುತ್ತದೆ, google.com ನ ಡೂಡಲ್ ವಿಭಾಗದ ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮೊದಲು ಆಚರಿಸಿದ್ದು 1911ರಲ್ಲಿ. ಮಹಿಳೆಯರ ಸಾಧನೆಗಳನ್ನು ಗುರುತಿಸಲು, ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು, ವೇಗವರ್ಧಿತ ಲಿಂಗ ಸಮಾನತೆಗಾಗಿ, ಸ್ತ್ರೀ-ಕೇಂದ್ರಿತ ದತ್ತಿಗಳಿಗೆ ನಿಧಿ ಸಂಗ್ರಹಿಸಲು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಡೆಸಲಾಗುತ್ತದೆ.
ಈ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳಿಗೆ ಮಾನ್ಯತೆಯನ್ನು ಸೂಚಿಸುತ್ತದೆ. ಪ್ರಪಂಚದಾದ್ಯಂತದ ಕಾಲೇಜುಗಳು ಮತ್ತು ಸಂಸ್ಥೆಗಳು ಸಾರ್ವಜನಿಕ ಭಾಷಣಗಳು, ರ್ಯಾಲಿಗಳು, ಪ್ರದರ್ಶನಗಳು, ಕಾರ್ಯಾಗಾರಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು ಮತ್ತು ಉಪನ್ಯಾಸಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತವೆ.