ಕಾಸರಗೋಡು: ಭಾರೀ ವಿವಾದ ಹಾಗೂ ಕುತೂಹಲ ಬಳಿಕ ಮಂಜೇಶ್ವರ ಮಂಡಲದ ಸಿ.ಪಿ.ಎಂ. ಅಭ್ಯರ್ಥಿಯಾಗಿ ಇಬ್ಬರೂ ಬೇಡ ಮೂರನೆಯವ ಸಾಕೆಂಬ ನಿಲುವು ತಾಳಿದ ಪಕ್ಷದ ಜಿಲ್ಲಾ ಸಮಿತಿ ಸವಾಲುಗಳಿಗೆ ಮಂಗಳಹಾಡಿದೆ.
ಸಿ.ಪಿ.ಎಂ.ಅಭ್ಯರ್ಥಿಯಾಗಿ ಕಾಞಂಗಾಡ್ ನಗರಸಭೆಯ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್ ಅವರನ್ನು ಕಣಕ್ಕಿಳಿಸಲಿದೆ. ಮೊನ್ನೆಯಿಂದ ನಡೆಯುತ್ತಿದ್ದ ಬಿರುಸಿನ ಚರ್ಚೆಯ ತರುವಾಯ ನಿನ್ನೆ ತಡರಾತ್ರಿಯ ವರೆಗೂ ಮಂಜೇಶ್ವರದಲ್ಲಿ ನಡೆದ ಮಂಡಲ ಸಮಿತಿ ಸಭೆಯಲ್ಲಿ ವಿ.ವಿ. ರಮೇಶನ್ ಅವರ ಹೆಸರನ್ನು ಸೂಚಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತೆಂದು ಪಕ್ಷದ ಮೂಲಗಳು ತಿಳಿಸಿದೆ. ಜಿಲ್ಲಾ ಸಮಿತಿಯ ನಿರ್ಧಾರವನ್ನು ಮಂಡಲ ಸಮಿತಿ ಅಂಗೀಕರಿಸಿ ತೀರ್ಮಾನಕ್ಕೆ ಹಸಿರು ನಿಶಾನೆ ತೋರಿಸಿತು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರೂ, ಡಿ.ವೈ.ಎಫ್.ಐ ರಾಜ್ಯ ಸಮಿತಿ ಮಾಜಿ ಖಜಾಂಜಿಯಾಗಿಯೂ ವಿ.ವಿ.ರಮೇಶನ್ ಕಾರ್ಯನಿರ್ವಹಿಸಿದ್ದಾರೆ. ಆರಂಭದಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಕೆ.ಆರ್.ಜಯಾನಂದ ಅವರನ್ನು ಅಭ್ಯರ್ಥಿಯಾಗಿ ಘೋಶಿಸಲು ಸನ್ನದ್ದವಾಗಿತ್ತು. ಈ ಮಧ್ಯೆ ಉಪ್ಪಳದಲ್ಲಿ ಜಯಾನಂದರ ವಿರುದ್ದ ಪೋಸ್ಟರ್ ಗಳು ಪ್ರತ್ಯಕ್ಷಗೊಂಡು ಸಾರ್ವಜನಿಕವಾಗಿ ಜಯಾನಂದರ ವಿರುದ್ದ ಬಂಡೇಳುವ ಸೂಚನೆ ನೀಡಿತ್ತು. ಇದರ ಬೆನ್ನಿಗೇ ಪಕ್ಷ ಶಂಕರ ರೈ ಮಾಸ್ತರ್ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆಸುತ್ತಿರುವಂತೆ ಅದಕ್ಕೂ ಭಿನ್ನರಾಗ ಕೇಳಿಬಂದಿದ್ದರಿಂದ ಕೊನೆಗೆ ಮೂರನೇ ಆಮದು ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಬೇಕಾಯಿತು.
ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಸಿಪಿಎಂಗೆ ನಿರೀಕ್ಷಿತ ಮತಗಳೂ ಲಭ್ಯವಾಗಿರಲಿಲ್ಲ. ಅಂದು ಶಂಕರ ರೈ ಮಾಸ್ತರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಕೆ.ಆರ್.ಜಯಾನಂದರನ್ನು ಕಣಕ್ಕಿಳಿಸಲು ಪಕ್ಷ ಆಶಯ ವ್ಯಕ್ತಪಡಿಸಿತ್ತು. ಆದರೆ ಮಂಜೇಶ್ವರ ಮಂಡಲ ಸಮಿತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಬೇಡವೆಂದು ವಿ.ವಿ.ರಮೇಶ್ ಅವರನ್ನು ಇದೀಗ ಸ್ಪರ್ಧಾ ಕಣಕ್ಕೆ ಇಳಿಸಲಾಗುತ್ತಿದೆ.
ಈ ಎಲ್ಲ ವಿದ್ಯಮಾನಗಳ ಹಿಂದೆ ಸಿಪಿಎಂ-ಡಿ.ವೈ.ಎಫ್.ಐ ತಂಡದಲ್ಲಿ ಪಕ್ಷದ ನಿಷ್ಠಾವಂತಿಕೆ ಮರೆಯಾಗಿ ಮಾಫಿಯಾಗಳ ಕೈವಾಡ ಕೆಲಸ ಮಾಡುತ್ತಿರುವುದು ವೇದ್ಯವಾಗುತ್ತಿದ್ದು, ಇದು ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂದು ವಿಶ್ಲೇಶಿಸಲಾಗಿದೆ.