ಮಲಪ್ಪುರಂ: ಕಾಸರಗೋಡಿನಲ್ಲಿ ಕೆ.ಎಂ.ಶಾಜಿಯನ್ನು ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ಕಾಸರಗೋಡು ಮುಸ್ಲಿಂ ಲೀಗ್ ಜಿಲ್ಲಾ ನಾಯಕರು ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ಅವರನ್ನು ಭೇಟಿಯಾಗಿ ಪ್ರತಿಭಟನೆ ವ್ಯಕ್ತಪಡಿಸಿರುವರು. ಕಾಸರಗೋಡು ಜಿಲ್ಲಾಧ್ಯಕ್ಷ ಇ.ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ರಹೀಮಾನ್, ಖಜಾಂಚಿ ಕಲ್ಲಟ್ರ ಮಾಹಿನ್ ಹಾಜಿ ಮತ್ತು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಪಾಣಕ್ಕಾಡ್ ನಲ್ಲಿ ಪ್ರತಿಭಟನೆ ನಡೆಸಿದರು.
ಕಾಸರಗೋಡಿನಲ್ಲಿ ಆಮದು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಗತ್ಯವಿಲ್ಲ ಮತ್ತು ಕಾಸರಗೋಡಿನಲ್ಲಿರುವವರು ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ನಾಯಕರು ಲೀಗ್ ಮುಖಂಡರಿಗೆ ಮಾಹಿತಿ ನೀಡಿದರು. ಜಿಲ್ಲಾ ನಾಯಕರು ಹೈದರ್ ಅಲಿ ಶಿಹಾಬ್ ಅವರನ್ನು ಭೇಟಿಯಾಗಿ ಬಳಿಕ ಪ್ರತಿಕ್ರಿಯಿಸಿದ್ದು, ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಅವರು ಈ ಹಿಂದೆ ಒತ್ತಾಯಿಸಿದ್ದರು ಮತ್ತು ಜಿಲ್ಲೆಯವರು ದೀರ್ಘಕಾಲದಿಂದ ಸ್ಪರ್ಧಿಸಿ ಜಯಗಳಿಸಿದ್ದರು ಎಂದು ತಿಳಿಸಿರುವರು.
ಬುಧವಾರ ಮುಖಂಡ ಕೆಎಂ ಶಾಜಿ ಅವರು ಅಜಿಕೋಡ್ ಕ್ಷೇತ್ರದಿಂದ ತಾನು ಸ್ಪರ್ಧಿಸುವುದಿಲ್ಲ. ಕಣ್ಣೂರು ಅಥವಾ ಕಾಸರಗೋಡದಲ್ಲಿ ಸ್ಪರ್ಧಿಸಲು ಉತ್ಸುಕನಾಗಿರುವೆ ಎಂದು ಹೇಳಿದ್ದರು. ಆದಾಗ್ಯೂ, ಕೆ.ಎಂ.ಶಾಜಿ, ಕಾಸರಗೋಡಲ್ಲಿ ಸ್ಪರ್ಧೆಗಿಳಿಯುವ ಬಗ್ಗೆ ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಿರಾಕರಿಸಿದರು. ಜಿಲ್ಲಾ ನಾಯಕರ ವಿರೋಧದ ಸಂದರ್ಭದಲ್ಲಿ ಶಾಜಿ ಅವರು ಅಜಿಕೋಡ್ ನಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ.