ಝೆನ್ ಕಥೆಯೊಂದು ಹೀಗಿದೆ: ಆಕೆ ಓರ್ವ ವೃದ್ಧೆ. ಅವಳು ಬುದ್ಧನ ಊರಿನಲ್ಲಿಯೇ, ಬುದ್ಧ ಜನಿಸಿದ ದಿನದಂದೇ ಜನಿಸಿದ್ದಳು. ಆದರೆ ಬಾಲ್ಯದಿಂದಲೂ ಆಕೆ ಬುದ್ಧನ ಎದುರಿಗೆ ಬರಲು ಹೆದರುತ್ತಿದ್ದಳು. 'ಯಾಕೆ ಹೆದರುವೆ? ಬುದ್ಧ ದಯಾಳು, ಪ್ರೇಮಸ್ವರೂಪ, ಪರಮಪವಿತ್ರ,
ಸಾಧುಮಹಾತ್ಮ, ಸಿದ್ಧಸಂತ' ಎಂದೆಲ್ಲ ಜನರು ಗುಣಗಾನಮಾಡುತ್ತಿದ್ದರು. ಏನು ಹೇಳಿದರೂ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವಾಗಲಾದರೂ ದಾರಿಯಲ್ಲಿ ಅಕಸ್ಮಾತ್ ಬುದ್ಧ ಎದುರಾದರೂ ತಕ್ಷಣ ಎಲ್ಲಿಯೋ ಸಂದಿಗೊಂದಿಗಳಲ್ಲಿ ಹೊಕ್ಕು ಮಾಯವಾಗಿಬಿಡುತ್ತಿದ್ದಳು. ಬುದ್ಧ ಆ ಊರಿನಲ್ಲಿ ತಂಗಿದ್ದ ಎಂದರೆ ವೃದ್ಧೆ (ಬಾಲ್ಯದಲ್ಲೂ, ಯೌವ್ವನದಲ್ಲೂ) ಪಕ್ಕದ ಊರಿಗೆ ಹೋಗಿ ತಂಗುತ್ತಿದ್ದಳು. ಒಂದು ದಿನ ಎಡವಟ್ಟಾಗಿ ಹೋಯಿತು; ಆಕೆ ತನ್ನದೇ ಲೋಕದಲ್ಲಿ ವಿಹರಿಸುತ್ತ ಹೋಗುತ್ತಿರುವಾಗ ಒಮ್ಮೆಲೇ ಬುದ್ಧ ಎದುರಿಗೆ ಬಂದುಬಿಟ್ಟ! ಈಗ ಅವಳಿಗೆ ಓಡಿಹೋಗಲಾಗಲಿಲ್ಲ; ತಪ್ಪಿಸಿಕೊಳ್ಳಲಾಗಲಿಲ್ಲ. ಕಣ್ಣುಮುಚ್ಚಿಕೊಂಡಳು. ಆಗಲೂ ಅವಳ ಕಣ್ಣೆದುರಿಗೆ ಕಿತ್ತಳೆ ವರ್ಣದ, ಬಂಗಾರದ ಬಣ್ಣದ ಬುದ್ಧನ ರೂಪ! ಆಕೆ ಇನ್ನಷ್ಟು ಹೆದರಿ ಬಲವಾಗಿ ಕಣ್ಣುಮುಚ್ಚಿಕೊಂಡಳು. ಕಣ್ಣುಮುಚ್ಚಿದಷ್ಟೂ ಇನ್ನೂ ಸುಸ್ಪಷ್ಟವಾಗಿ ಬುದ್ಧ ಅವಳ ಒಳಗೆ ಇಳಿದುಬರುತ್ತಿದ್ದ. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿ ಮೃತ್ಯುನಿಶ್ಚಯ ಎಂಬ ಪ್ರತೀತಿ ಅವಳಲ್ಲಿ ಉಂಟಾಯಿತು. ಇನ್ನೊಂದೇ ಕ್ಷಣದಲ್ಲಿ ಆಕೆ ಇಲ್ಲವಾದಳು. ಹೌದು, ವೃದ್ಧೆ ಇಲ್ಲವಾಗಿಬಿಟ್ಟಳು; ಬುದ್ಧ ಮಾತ್ರ ಇದ್ದ. ಝೆನ್ ಗುರು ಅಂದಿನಿಂದಲೂ ಕೇಳುತ್ತಲೇ ಇದ್ದಾರೆ: 'ಹೇಳಿ, ಆ ವೃದ್ಧೆ ಯಾರು ?'
ಇದೊಂದು ಅದ್ಭುತ ದೃಷ್ಟಾಂತ ಕಥೆ ಅಥವಾ ಘಟನೆ. 'ಆ ವೃದ್ಧೆ ಯಾರು?' ಅನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಆ ವೃದ್ಧೆ ಅರ್ಥಪರಂಪರೆಯನ್ನೇ ತೆರೆದುಕೊಳ್ಳುತ್ತ ಹೋಗುತ್ತದೆ.
ಅಜ್ಞಾನಕತ್ತಲೆಯು ಕತ್ತಲೆಯೆ ಮರಣಭಯ / ಸುಜ್ಞಾನ ಬುದ್ಧತ್ವ ಕಂಡರದು ನಿಲ್ಲದು. / ತಮದಂಧಕಾರವದು ನಿಲ್ಲುವುದೆ ಜ್ಯೋತಿ ಬರೆ? / ಉಳಿಯುವುದು ಬುದ್ಧತ್ವ ಅಳಿದೆಲ್ಲದು.! ಎಂದು ದಾರ್ಶನಿಕರು ಹೇಳುವಂತೆ, ಆ ವೃದ್ಧೆ ಆಗಲೂ ಇದ್ದಳು. ಈಗಲೂ ಇದ್ದಾಳೆ. ಎಲ್ಲರೊಳಗೂ ಇದ್ದಾಳೆ. ಅವಳೇ ಅಜ್ಞಾನ;ಮೃತ್ಯು, ಮರಣಭಯ, ಆತಂಕ. ಅಜ್ಞಾನವೇ ಮೃತ್ಯು. ಜ್ಞಾನಿಗೆ ಮೃತ್ಯುಭಯವಿಲ್ಲ. ಅಜ್ಞಾನ ಕತ್ತಲು. ಭೂತದ ಭಯ ಕತ್ತಲೆಯಲ್ಲಿಯೇ. ಬೆಳಕಿನಲ್ಲಿ ಅದರ ಭಯವಿಲ್ಲ. ಅಜ್ಞಾನ ಅಥವಾ ಕತ್ತಲೆ ಯಾವಾಗಲೂ ಇರುತ್ತದೆ. ಜ್ಞಾನ ಅರ್ಥಾತ್ ಪ್ರಕಾಶ ಅದನ್ನು ಇಲ್ಲವಾಗಿಸುತ್ತದೆ. ಬುದ್ಧತ್ವ ಎಂದರೆ ಅರಿವು;ತಿಳಿವಳಿಕೆ. ಅದು ಯಾವಾಗಲೂ ಇದ್ದೇ ಇರುತ್ತದೆ;ಶಾಶ್ವತ. ಈ ಕಥೆ ಹೇಳುತ್ತದೆ; ಮಾನವ ಜೀವನದ ಪರಮಗುರಿಯೆಂದರೆ ಬುದ್ಧತ್ವ. ಅಜ್ಞಾನದ ಪ್ರತೀಕವಾದ ವೃದ್ಧೆಯಂತೆ-ಗಮನಿಸಬೇಕು ಅವಳು ಮೊದಲು ವೃದ್ಧೆಯಾಗಿರಲಿಲ್ಲ; ಮಗುವಾಗಿದ್ದಳು, ಬಾಲಕಿಯಾದಳು,ಯುವತಿಯಾದಳು, ವೃದ್ಧೆಯಾದಳು! ಅಜ್ಞಾನವು ಹೀಗೆಯೇ ಬೆಳೆಯುತ್ತದೆ. ಆದ್ದರಿಂದ ಜ್ಞಾನಕ್ಕೆ ಹೆದರಿಕೊಳ್ಳಬಾರದು. ಮನಸ್ಸು, ಬುದ್ಧಿ, ಹೃದಯಗಳ ಬಾಗಿಲನ್ನು ಸದಾ ತೆರೆದಿಡಬೇಕು. ಬುದ್ಧ ಅಥವಾ ಜ್ಞಾನವನ್ನು ಧಾರೆಯೆರೆಯುವ ಜ್ಞಾನಿ ಎದುರಾದಾಗ ಅವನನ್ನು ಎದುರುಗೊಳ್ಳಬೇಕು. ಒಳಗೆ ಸ್ವಾಗತಿಸಬೇಕು. ಹೆದರಿ ಪಲಾಯನಮಾಡಬಾರದು. ಮೃತ್ಯುವಿನ ದೂತನಂತಿ ರುವ ಭಯವನ್ನು ಪಿಶಾಚಿಯಂತೆ ದೂರತಳ್ಳಿಬಿಡಬೇಕು. ಬುದ್ಧನ ಪ್ರವೇಶವಾದರೆ ಭಯದ ವೃದ್ಧೆ ಮಾಯವಾಗುತ್ತಾಳೆ. ಜೀವನ ಸುಖಮಯವಾಗುತ್ತದೆ; ಅಂತ್ಯವೂ ಶಾಂತಿದಾಯಕವಾಗುತ್ತದೆ.
ಇಂದು ನನಗನಿಸುವುದು, ಕೋವಿಡ್ ಮಹಾಮಾರಿ ಇನ್ನೂ ನಮ್ಮ ಸುತ್ತೆಲ್ಲ ಕದಂಬ ಬಾಹುಗಳೊಂದಿಗೆ ಆಟವಾಡುತ್ತಿದೆ. ಒಮ್ಮೆ ನಮ್ಮ ಬಳಿ...ಮತ್ತೊಮ್ಮೆ ಅಲ್ಲೆಲ್ಲೋ ದೂರದಲ್ಲಿ. ಇದ್ಯಾಕೆ ಹೀಗೆ? ಇದಕ್ಕೊಂದು ಪರಿಪೂರ್ಣ ವಿರಾಮವಿರಲಾರದೆ.ಎಷ್ಟೊಂದು ಸವಾಲುಗಳು.ಕೊರೊನಾದ ಹೆಸರಲ್ಲಿ!
ವೇತನ ಇಲ್ಲ, ಬೆಳೆಯುತ್ತಿದೆ ಖರ್ಚು ವೆಚ್ಚಗಳೆಲ್ಲ!.ಸಾಮಾನ್ಯ ಜನರಿಗೆ ಏನೊಂದು ಮಾಡಬೇಕೆಂಬುದು ಅರ್ಥವಾಗದೆ ನಿಶ್ಚಲತೆಯ ಸ್ಥಿತಿ. ಆಳುವವರು ಪುಂಗಿ ಊದುತ್ತಲೇ ಇದ್ದಾರೆ. ಇಲ್ಲ....ಇನ್ನು ಭಯವಿಲ್ಲ. ಕೊರೊನಾವನ್ನು ಗೆದ್ದೆವು.....ಎಂದೆಲ್ಲ. ಎಲ್ಲಿ ಗೆದ್ದಿದ್ದೇವೆ....ಹುಡುಕಬೇಕಾಗಿದೆ.