ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 'ಕ್ರೀಡೋತ್ಸವ 2021' ಕಾರ್ಯಕ್ರಮ ಸಂಭ್ರಮದಿಂದ ಸೋಮವಾರ ನಡೆಯಿತು.
ಕೋವಿಡ್ ನಿಯಂತ್ರಣಾ ಮಾನದಂಡಗಳನ್ನು ಪಾಲಿಸಿಕೊಂಡು ನಡೆಸಿದ ಕಾರ್ಯಕ್ರಮವನ್ನು ಬೆಳಿಗ್ಗೆ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಿದರು. ಬಳಿಕ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು.
ಈ ಸಂದರ್ಭ ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡ ಕುಳೂರು ಶಾಲಾ ಆನ್ಲೈನ್ ವಾರ್ಷಿಕೋತ್ಸವ ಮತ್ತು ಕುಳೂರು ಕ್ರಿಯೇಷನ್ ಅರ್ಪಿಸುವ 'ಕಂಟಕ' ತುಳು ಕಿರುಚಿತ್ರದ ಪ್ರದರ್ಶನ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂ. ಎಲ್, ಕುಳೂರು ವಾರ್ಡ್ ಸದಸ್ಯ ಜನಾರ್ಧನ ಪೂಜಾರಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಯುವ ಉದ್ಯಮಿ ಮತ್ತು ಕಂಟಕ ತುಳು ಕಿರುಚಿತ್ರದ ನಿರ್ಮಾಪಕ ಮೋಹನ್ ಶೆಟ್ಟಿ ಮಜ್ಜಾರ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೀಂಜ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಕುಳೂರು ಶಾಲಾ ಹಳೆ ವಿದ್ಯಾರ್ಥಿ ಜನಾರ್ಧನ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ 'ಕಂಟಕ' ಕಿರುಚಿತ್ರದ ತಾಂತ್ರಿಕ ವರ್ಗ ಮತ್ತು ಪ್ರಮುಖ ಕಲಾವಿದರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಕಳೆದ ಶೈಕ್ಷಣಿಕ ವರ್ಷದ ಎಲ್. ಎಸ್. ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಶ್ರೇಣಿಕ್ ಕರ್ಕೇರ, ಆನ್ಲೈನ್ ಚಟುವಟಿಕೆ ಮತ್ತು ಆನ್ಲೈನ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದವನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೊತೆಗೆ ಕ್ರೀಡೋತ್ಸವದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.