ಬದಿಯಡ್ಕ: ವೃತ್ತಿಯಿಂದ ನಿವೃತ್ತರಾಗುವುದು ಸುಧೀರ್ಘ ಸೇವಾವಧಿಯ ಒಂದು ಹಂತದ ವಿರಾಮವಾಗಿದ್ದು, ಅನುಭವಗಳ ಮೂಸೆಯಿಂದ ಬದುಕಿನ ಸಾರ್ಥಕತೆಯನ್ನು ಇತರ ಚಟುವಟಿಕೆಗಳಲ್ಲಿ ಸಾಫಲ್ಯಗೊಳಿಸಲಿರುವ ಅವಕಾಶವಾಗಿದೆ ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಅವರು ತಿಳಿಸಿದರು.
ಬೇಳ ಸಂತ ಬಾರ್ತಲೋಮಿಯ ಶಾಲೆಯಿಂದ ನಿವೃತ್ತರಾದ ಶಿಕ್ಷಕಿ ಕ್ರಿಸ್ಟನಿ ಡಿಸೋಜ ಹಾಗೂ ಕಚೇರಿ ನೌಕರ ಗಿಲ್ಬರ್ಟ್ ಕ್ರಾಸ್ತಾ ಅವರಿಗೆ ಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿದಾಯ ಕೂಟವನ್ನು ಉದ್ಘಾಟಿಸಿ, ನಿವೃತ್ತರಾಗುವವರಿಗೆ ಶುಭಹಾರೈಸಿ ಅವರು ಮಾತನಾಡಿದರು.
ಉಪಜಿಲ್ಲೆಯ ಅತ್ಯುತ್ತಮ ವಿದ್ಯಾಲಯಗಳಲ್ಲಿ ಒಂದಾದ ಬೇಳ ಶಾಲೆಯ ಸಮಗ್ರ ಬೆಳವಣಿಗೆಗಳ ಹಿಂದೆ ಇಲ್ಲಿಯ ಶಿಕ್ಷಕ-ಶಿಕ್ಷಕೇತರ ವೃಂದದವರ ಅಪರಿಮಿತ ಶ್ರಮ ಎಂದಿಗೂ ಅಚ್ಚಳಿಯದೆ ಉಳಿಯುವಂತದ್ದಾಗಿದೆ. ಶ್ರಮ, ತ್ಯಾಗ, ಹೃದಯ ವಿಶಾಲತೆಯ ವೃತ್ತಿ ಕೌಶಲ್ಯತೆಗಳು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದೆ ಎಂದ ಅವರು ಪ್ರತಿಯೊಬ್ಬರ ಜೀವನಾನುಭವಗಳಿಗೂ ಮಹತ್ತರವಾದ ಮೌಲ್ಯಗಳಿದ್ದು, ಪರಸ್ಪರ ಗೌರವಿಸುವ ಸನ್ಮನಸ್ಸು ಇರಬೇಕು ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಥಾಯಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಾಧ್ಯಕ್ಷ ಹಾಗೂ ಕಾಸರಗೋಡು ಬ್ಲಾ.ಪಂ.ಸದಸ್ಯರೂ ಆದ ಸುಕುಮಾರ ಕುದ್ರೆಪ್ಪಾಡಿ, ಬದಿಯಡ್ಕ ಗ್ರಾ.ಪಂ.ಸದಸ್ಯ ಶಂಕರ ಡಿ.,ಬ್ಲಾ.ಪಂ. ಇನ್ನೋರ್ವೆ ಸದಸ್ಯೆ ಜಯಂತಿ, ಶಾಲಾ ಪ್ರಬಂಧಕಿ ಸಿಸ್ಟರ್ ಮಾರ್ಗರೆಟ್ ಡಿಸೋಜ, ಸಂಚಾಲಕಿ ಸಿಸ್ಟರ್ ಕಾರ್ಮಿನ್ ಪಿರೇರ, ಮಾತೃಸಂಘದ ಅಧ್ಯಕ್ಷೆ ಸುಲೋಚನ ಉಪಸ್ಥಿತರಿದ್ದು ಶುಭಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿಸಿ ಸಿಸ್ಟರ್ ನಿವೇದಿತಾ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಬನಶಂಕರಿ ಟೀಚರ್ ವಂದಿಸಿದರು. ಶಿಕ್ಷಕ ಸ್ಟೇನಿ ಲೋಬೋ ಕಲ್ಲಕಟ್ಟ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕರು, ಶಿಕ್ಷಕಿಯರು, ನೌಕರರು ಸಹಕರಿಸಿದರು.