ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಮತ್ತು ಕೊರೊನಾವೈರಸ್ ಲಸಿಕೆಯ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ್ದೆ ತೃಣಮೂಲ ಕಾಂಗ್ರೆಸ್ ಪಕ್ಷ ದೂರು ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಬುಧವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಟಿಎಂಸಿ ನಿಯೋಗ ಭೇಟಿ ಮಾಡಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರ ಬಳಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ವಿರುದ್ಧ ದೂರು ದಾಖಲಿಸಿದೆ.
ಕೊವಿಡ್-19 ಲಸಿಕೆ ಸೇರಿದಂತೆ ಸರ್ಕಾರಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಹಾಕುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಚುನಾವಣಾ ಸಮಿತಿ ಮಧ್ಯಪ್ರವೇಶಿಸಬೇಕು. ಪೆಟ್ರೋಲ್ ಬಂಕ್ ಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿರುವ ಹೋಲ್ಡಿಂಗ್ಸ್ ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಜನರ ತೆರಿಗೆ ಹಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ:
ಕೇಂದ್ರ ಸರ್ಕಾರವು ಸಾರ್ವಜನಿಕರ ತೆರಿಗೆದಾರರ ಹಣದಲ್ಲಿ ನೀತಿ ಸಂಹಿತೆ ವಿರುದ್ಧ ಪ್ರಚಾರ ಪಡೆಯುವುದು ಸೂಕ್ತವಲ್ಲ, ಈ ಬಗ್ಗೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕೂಡಲೇ ಪ್ರಧಾನಿ ಮೋದಿ ಭಾವಚಿತ್ರವನ್ನು ಕೊರೊನಾವೈರಸ್ ಪ್ರಮಾಣಪತ್ರದಿಂದ ತೆಗೆದು ಹಾಕುಬೇಕು ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಓ'ಬ್ರಿಯೆನ್ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ:
ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಈ ಪೈಕಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.