ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯ ಸಿಬ್ಬಂದಿಗೆ ಸೂಕ್ತ ಅವಧಿಯಲ್ಲಿ ಸ್ವಾದಿಷ್ಟ, ಆರೋಗ್ಯಕರ ಆಹಾರ ಪೂರೈಕೆಯ ಹೊಣೆಹೊತ್ತಿರುವ ಕುಟುಂಬಶ್ರೀ ಈ ಬಾರಿಯೂ ತನ್ನ ಕೊಡುಗೆ ನೀಡಲಿದೆ.
ಚಹಾದಿಂದ ಬಿರಿಯಾನಿ ವರೆಗೆ ಆಹಾರ ವೈವಿಧ್ಯವನ್ನು ಕುಟುಂಬಶ್ರೀ ಕಾರ್ಯಕರ್ತರು ಸಿಬ್ಬಂದಿಗಾಗಿ ಉಣಬಡಿಸಲಿದ್ದಾರೆ. ವಿತರಣೆ ಕೇಂದ್ರಗಳಲ್ಲಿ ಇಡ್ಲಿ, ದೋಸೆ, ಸಾಂಬಾರ್, ಕಡ್ಲೆ ಕರ್ರಿ, ಚಹಾ, ಹಣ್ಣಿನ ರಸ, ಲಘು ಉಪಹಾರಗಳು, ಸಸ್ಯಾಹಾರಿ ಬಿರಿಯಾನಿ, ಚಿಕ್ಕನ್ ಬಿರಿಯಾನಿ, ರಾತ್ರಿಯ ಖಾದ್ಯಗಳು ಇತ್ಯಾದಿಗಳು ಇಲ್ಲಿನ ವಿಶೇಷತೆಗಳಾಗಿವೆ. ಭೋಜನದಲ್ಲಿ ಎರಡು ಬಗೆ ಕರಿಗಳು, ಉಪ್ಪಿನ ಕಾಯಿ, ಪಲ್ಯಗಳಿರುವುವು.
ಕಲೆಕ್ಷನ್ ಸೆಂಟರ್ ಗಳಲ್ಲಿ ಚಹಾ, ಲಘು ಉಪಹಾರ, ಸಸ್ಯಾಹಾರ/ ಮಾಂಸಾಹಾರ ಬಿರಿಯಾನಿಗಳು, ಹಣ್ಣಿನ ರಸ, ಚಪಾತಿ, ಸಸ್ಯಾಹಾರಿ ಕರ್ರಿ ಇತ್ಯಾದಿ ವಿತರಣೆಗೊಳ್ಳಲಿವೆ.
ಮೇ 5ರಂದು ಮತ ಎಣಿಕೆ ಕೇಂದ್ರದಲ್ಲಿ ಇಡ್ಲಿ, ದೋಸೆ, ಸಾಂಬಾರ್, ಕಡ್ಲೆ ಕರ್ರಿ, ಹಣ್ಣಿನ ರಸ, ಚಹಾ, ಲಘು ಉಪಹಾರ, ಸಸ್ಯಹಾರಿ/ ಮಾಂಸಾಹಾರಿ ಬಿರಿಯಾನಿಗಳು ಇತ್ಯಾದಿ ವಿತರಣೆಗೊಳ್ಳಲಿವೆ.
ಸಿಬ್ಬಂದಿಗೆ ಆಹಾರ ಪೂರೈಕೆ ಮಾತ್ರವಲ್ಲದೆ ಮತಗಟ್ಟೆಗಳ ಶುಚೀಕರಣ ಹೊಣೆಯೂ ಕುಟುಂಬಶ್ರೀ ಕಾರ್ಯಕರ್ತರಿಗಿದೆ. ಈಗಾಗಲೇ ವಿತರಣೆ, ಸಂಗ್ರಹ ಕೇಂದ್ರಗಳ ಶುಚೀಕರಣ, ರೋಗಾಣುಮುಕ್ತ ಗೊಳಿಸುವಿಕೆ ಕುಟುಂಬಶ್ರೀ ವತಿಯಿಂದ ನಡೆದಿವೆ. ಏ.6ರಂದು ಮತಗಟ್ಟೆಗಳಿಗೆ ತಲಪಲಿರುವ ಮತದಾತರಿಗೆ, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಕುಡಿಯುವ ನೀರಿನ ಸರಬರಾಜು ಕೂಡ ಇವರ ಹೊಣೆಯಾಗಿದೆ.