ಕಾಸರಗೋಡು: ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಕಾಸರಗೋಡು ಜಿಲ್ಲಾ ಸಮಿತಿ ಸಭೆ ಮಾಧ್ಯಮ ವ್ಯಕ್ತಿಗಳಿಗೆ ಕೋವಿಡ್ ಲಸಿಕೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.
ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವವರು ಎಲ್ಲೆಡೆ ಸಂಚರಿಸಿ ಸುದ್ದಿಗಳನ್ನು ಸಂಗ್ರಹಿಸಿ ಅದನ್ನು ಜನರಿಗೆ ತಲುಪಿಸುವ ತುರ್ತು ಸೇವಾ ವಲಯದಲ್ಲಿರುವವರಾಗಿದ್ದಾರೆ. ಆದ್ದರಿಂದ ಸರ್ಕಾರದ ಆರೋಗ್ಯ ವಿಮೆಗೆ ಅವಕಾಶ ನೀಡಬೇಕು ಎಂದು ಸಭೆ ಅಭಿಪ್ರಾಯಪಟ್ಟಿದೆ.
ಮಾರ್ಚ್ 14 ಮತ್ತು 15 ರಂದು ಆಲಪ್ಪುಳ ಜಿಲ್ಲೆಯ ಕಾಯಂಕುಳಂನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಭೆ ನಿರ್ಧರಿಸಿತು. ಕಾಸರಗೋಡು ಜಿಲ್ಲೆಯ ಹತ್ತು ಪ್ರತಿನಿಧಿಗಳು ಕೋವಿಡ್ ಮಾನದಂಡಗಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಕಾಞಂಗಾಡ್ ಸರ್ಕಾರಿ ಅತಿಥಿ ಗೃಹದಲ್ಲಿ ಇತ್ತೀಚೆಗೆ ನಡೆದ ಸಭೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ.ನಾಸರ್ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಕೆ.ಸಿ. ಸ್ಮಿಜನ್ ಅಲುವಾ ಅವರು ಸಭೆಯಲ್ಲಿ ಸಂಘಟನೆಯ ರಾಜ್ಯ ಸಮ್ಮೇಳನದ ಕುರಿತು ಆನ್ ಲೈನ್‍ನಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷ ಲತೀಫ್ ಉಳುವಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸಲಹೆಗಾರ, ಹಿರಿಯ ಪತ್ರಕರ್ತ ಟಿ.ಪಿ.ರಾಘವನ್, ಕಾರ್ಯದರ್ಶಿ ಎಂ.ಪ್ರಮೋದ್ ಕುಮಾರ್ ಮತ್ತು ಜೊತೆ ಕಾರ್ಯದರ್ಶಿ ಪುರುಷೋತ್ತಮ ಭಟ್ ಮಾತನಾಡಿದರು.