ಬೆಂಗಳೂರು: ಆರ್ ಎಸ್ ಎಸ್ ನ ಎರಡನೇ ಅತ್ಯುನ್ನತ ಜವಾಬ್ದಾರಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆಯವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಹೊರ ವಲಯದಲ್ಲಿರುವ ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ದಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ರಾಗಿ ಆಯ್ಕೆಯಾಗಿದ್ದಾರೆ.
ಸರಸಂಘಚಾಲಕ್ ಆರ್ ಎಸ್ ಎಸ್ ನ ಅತ್ಯುನ್ನತ ಜವಾಬ್ದಾರಿಯಾಗಿದ್ದು, ಸರಕಾರ್ಯವಾಹ ಎರಡನೇ ಅತ್ಯುನ್ನತ ಹಾಗೂ ಅತಿ ಹೆಚ್ಚು ಜವಾಬ್ದಾರಿಯ ಹುದ್ದೆಯಾಗಿದೆ. ಮೋಹನ್ ಭಾಗ್ವತ್ ಅವರು ಆರ್ ಎಸ್ ಎಸ್ ನ ಸರಸಂಘಚಾಲಕ್ ಆಗಿ ಸೇವೆ ಸಲ್ಲಿಸುತ್ತಿದ್ದು, 2009 ರಿಂದ ಈ ವರೆಗೂ ಸುರೇಶ್ ಭೈಯ್ಯಾಜಿ ಜೋಷಿಯವರು ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾ.20 ರಂದು ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸುರೇಶ್ ಭೈಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಹೋ.ವೇ ಶೇಷಾದ್ರಿ ಅವರ ನಂತರ ಕನ್ನಡಿಗರೊಬ್ಬರಿಗೆ ಮತ್ತೊಮ್ಮೆ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ.