ಆಕೆ ಸುಮಾರು 50 ವರ್ಷದ ಆಸುಪಾಸಿನ ಮಹಿಳೆ, ಕಲಾವಿದೆಯಾಗಿ ಕರ್ನಾಟಕದಾದ್ಯಂತ ಸಾಕಷ್ಟು ಜನಪ್ರಿಯ. ಹೆಸರು, ಸೌಂದರ್ಯ, ಸಂಪಾದನೆ, ಐಶ್ವರ್ಯ ಎಲ್ಲವೂ ಇದೆ, ಇಂತಹ ಮಹಿಳೆ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ 'ನಾನು ಡಿಪ್ರೆಷನ್ ನಲ್ಲಿದ್ದೇನೆ, ನನ್ನೊಳಗೆ ಸಾಕಷ್ಟು ತೊಳಲಾಟಗಳಿವೆ, ಯಾರೊಡನೆಯೂ ಹೊರಗಡೆ ಹೇಳಿಕೊಳ್ಳಲಾಗುತ್ತಿಲ್ಲ. ಹೊರಗಡೆ ಜನ ನಮ್ಮನ್ನು ನೋಡಿದರೆ ಇವರಿಗೇನು, ಏನು ಕಡಿಮೆಯಾಗಿದೆ ಎಂದು ಮಾತನಾಡಿಕೊಳ್ಳುತ್ತಾರೆ, ಆದರೆ ನಮ್ಮ ಜೀವನದಲ್ಲಿಯೂ ಸಾಕಷ್ಟು ನೋವುಗಳು, ಹೊರಗೆ ಹೇಳಿಕೊಳ್ಳಲಾಗದ ಸಾಕಷ್ಟು ಸಂಕಟ-ದುಃಖ ಇರುತ್ತವೆ' ಎಂದರು.
ಇವರ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ನಂಬಲಾಗಲಿಲ್ಲ, ಆಮೇಲೆ ಕೂಲಂಕಷವಾಗಿ ಯೋಚಿಸಿದಾಗ ಇರಬಹುದು ಎನಿಸಿತು, ಏಕೆಂದರೆ ಸಮಾಜದಲ್ಲಿ ಹೊರಗೆ ನಾಲ್ಕು ಜನರ ಕಣ್ಣಿಗೆ ಕಾಣಿಸುವಾಗ ಹೇಗೆಯೇ ಇರಲಿ ಮನೆಯೊಳಗೆ ಸಾಮಾನ್ಯರು, ಸಿರಿವಂತರು, ಸೆಲೆಬ್ರಿಟಿಗಳು, ಗಣ್ಯರು ಎಲ್ಲರೂ ಒಂದೆಯಲ್ಲವೇ, 'ಊರಿಗೆ ಅರಸನಾದರೂ ತಾಯಿಗೆ ಮಗನಲ್ಲವೇ'ಎಂಬ ಗಾದೆ ಮಾತು ನೆನಪಿಗೆ ಬಂತು.
ಇಂದು ಮಹಿಳೆ ಸಮಾಜದಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾಳೆ, ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾಳೆ, ಪುರುಷನಿಗೆ ಸಮನಾಗಿ ವಿದ್ಯೆ ಗಳಿಸಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡಿ ತನ್ನಷ್ಟಕ್ಕೆ ಬದುಕು ರೂಪಿಸುವಷ್ಟು ಬುದ್ದಿವಂತಳೂ, ಸಮರ್ಥಳೂ ಇದ್ದಾಳೆ, ವ್ಯವಹಾರ ಜ್ಞಾನ, ಸಾಮಾನ್ಯ ಜ್ಞಾನವೂ ಮಹಿಳೆಯರಿಗೆ ಚೆನ್ನಾಗಿರುತ್ತದೆ, ಸಮಾಜದಲ್ಲಿ, ವೃತ್ತಿ ಜೀವನದಲ್ಲಿ ತನ್ನ ಛಾಪನ್ನು ಮೂಡಿಸುವ ಇಂದಿನ ಹಲವು ಹೆಣ್ಣುಮಕ್ಕಳು ವೈಯಕ್ತಿಕ ಜೀವನದಲ್ಲಿ ಎಡವುತ್ತಿದ್ದಾರೆ ಎನಿಸುವುದಿಲ್ಲವೇ?
ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನೂ ಚೆನ್ನಾಗಿ ನಿಭಾಯಿಸಿಕೊಂಡು ಖುಷಿಯಾಗಿ, ಸಂತೃಪ್ತಿಯಿಂದ ಇರುವ ಮಹಿಳೆಯರು ನಮ್ಮ ನಡುವೆ ಇರುವುದು ಬೆರಳೆಣಿಕೆಯ ಮಂದಿಯಷ್ಟೆ. ನಮ್ಮ ತಾಯಿ, ಅಜ್ಜಿಯಂದಿರು ಶಾಲೆ, ಕಾಲೇಜಿಗೆ ಹೋಗಿ ವಿದ್ಯೆ ಕಲಿತಿಲ್ಲದಿರಬಹುದು, ವಿದ್ಯಾವಂತರಾಗಿ, ಕೆಲಸಕ್ಕೆ ಸೇರಿ ಸಾವಿರಗಟ್ಟಲೆ, ಲಕ್ಷಗಟ್ಟಲೆ ತಿಂಗಳಿಗೆ ದುಡಿಯುತ್ತಿಲ್ಲದಿದ್ದಿರಬಹುದು, ಆರ್ಥಿಕವಾಗಿ ಸಬಲರಾಗಿಲ್ಲದಿದ್ದರಬಹುದು, ಆದರೆ ಜೀವನದ ಸಂಧ್ಯಾಕಾಲದಲ್ಲಿ ಚಿಂತೆ, ಕೊರಗಿನಿಂದ ಕಳೆಯುತ್ತಿರಲಿಲ್ಲ.
ಮದುವೆ ಮುಂದೂಡುವಿಕೆ: ಇಂದಿನ ಮಹಿಳೆಯರ ಖಿನ್ನತೆ, ಕೊರಗುವಿಕೆಗೆ ಹತ್ತಾರು ಕಾರಣಗಳಿರಬಹುದು, ಅವುಗಳಲ್ಲಿ ಬಹುಮುಖ್ಯವಾದುದು ಓದು, ಉದ್ಯೋಗ ಎಂದು ವೈಯಕ್ತಿಕ ಬದುಕಿಗೆ ಪ್ರಾಮುಖ್ಯತೆ ನೀಡದಿರುವುದು. ಹಿಂದೆ 18-20 ವರ್ಷವಾದರೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದರು. ಇಂದು ಪೋಷಕರು ಸಾಮಾನ್ಯವಾಗಿ ತಮ್ಮ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಿ ಒಳ್ಳೆಯ ನೌಕರಿಗೆ ಸೇರಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎಂದು ಬಯಸುತ್ತಾರೆ. ಹೆಣ್ಣು ಮಕ್ಕಳು ಓದಿ, ನೌಕರಿ ಪಡೆಯುವ ಹೊತ್ತಿಗೆ 25 ವರ್ಷವಾಗಿರುತ್ತದೆ. ನಂತರ ವೃತ್ತಿಯಲ್ಲಿ ಸಾಧನೆ ಮಾಡಬೇಕೆಂದು ಕೆಲವರು 30 ವರ್ಷವಾದರೂ ಮದುವೆ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ.
ಅಷ್ಟು ಹೊತ್ತಿಗೆ ಯೌವ್ವನದ ಹರೆಯ ದಾಟಿರುತ್ತದೆ. ತನ್ನ ವೃತ್ತಿ, ಅಂತಸ್ತಿಗೆ ಸರಿಯಾದ ವರ ಸಿಕ್ಕಿದರೆ ಮದುವೆಯಾಗುತ್ತಾರೆ, ಇಲ್ಲದಿದ್ದರೆ ಸುಮ್ಮನಿದ್ದು ಬಿಡುತ್ತಾರೆ. ದೇಹದಲ್ಲಿ ಆರೋಗ್ಯ, ಶಕ್ತಿಯಿರುವಾಗ ಮಹಿಳೆಯರಿಗೆ ಬ್ಯುಸಿ ಜೀವನದ ಮಧ್ಯೆ ಜೀವನ ಹೋಗುವುದು, ವಯಸ್ಸು ದಾಟುವುದು ಗೊತ್ತಾಗುವುದಿಲ್ಲ, ಖಿನ್ನತೆ ಬರುವುದು ನಡುವಯಸ್ಸು 40 ದಾಟಿದ ಮೇಲೆ. ಒಂಟಿ ಜೀವನ, ತಾನು ಸಂಪಾದಿಸುವುದು, ಬದುಕುವುದು ಯಾರಿಗಾಗಿ ಎಂಬ ಭಾವನೆ ಮೂಡಲಾರಂಭಿಸುತ್ತದೆ, ಆಗ ಬರುವುದೇ ಖಿನ್ನತೆ, ಕೆಲವು ಮಹಿಳೆಯರು ಆಧ್ಯಾತ್ಮದತ್ತ ಮುಖ ಮಾಡುತ್ತಾರೆ.
ಕೆಲವರಿಗೆ ನಡುವಯಸ್ಸಲ್ಲಿ ಜೀವನ ಸಂಗಾತಿ ಬೇಕೆನಿಸುತ್ತದೆ. ನಡುವಯಸ್ಸಿನ ಮಹಿಳೆಗೆ ಉತ್ತಮ ಜೀವನ ಸಂಗಾತಿ ಸಿಗುವುದು ಅಪರೂಪ. ತನ್ನ ಮನದಿಚ್ಛೆಯ, ರೂಪವಂತ, ಗುಣವಂತ, ಸಮಾನ ಅಂತಸ್ತಿನ ವರ ಸಿಗುವುದು ಅದೃಷ್ಟವಂತ ಮಹಿಳೆಯರಿಗೆ ಮಾತ್ರ.
ಸದ್ಯಕ್ಕೆ ಮಗು ಬೇಡವೆಂದು ಮುಂದೂಡುವುದು: ಇಂದಿನ ಆಧುನಿಕ ಶೈಲಿಯ ಜೀವನದಲ್ಲಿ ವಿವಾಹವಾದ ದಂಪತಿ ಮದುವೆಯಾದ ಕೂಡಲೇ ಮಗು ಬೇಡವೆಂದು ತೀರ್ಮಾನಿಸುತ್ತಾರೆ. ದಂಪತಿ ಪರಸ್ಪರ ಅರ್ಥ ಮಾಡಿಕೊಳ್ಳಬೇಕು, ಆರ್ಥಿಕವಾಗಿ ಸಬಲರಾಗಬೇಕು, ವೃತ್ತಿಯಲ್ಲಿ ಸಾಧನೆ ಮಾಡಬೇಕೆಂದು, ಇನ್ನಷ್ಟು ಕಲಿಯಬೇಕು ಎಂದು ಮದುವೆಯಾಗಿ ನಾಲ್ಕೈದು ವರ್ಷಗಳವರೆಗೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ. ಹೀಗಾದಾಗ ಕೆಲವೊಮ್ಮೆ ವಯಸ್ಸು ಮೀರಿ ಹೋದರೆ ಮಕ್ಕಳಾಗುವುದು ಕಷ್ಟವಾಗುತ್ತದೆ.
ನಗರದ ಒತ್ತಡದ ಬದುಕು, ಜೀವನ ಶೈಲಿಯಿಂದಾಗಿ ಸಣ್ಣ ವಯಸ್ಸಿನ ದಂಪತಿಯಾಗಿದ್ದರೂ ಕೂಡ ಹಲವೊಮ್ಮೆ ಮಕ್ಕಳಾಗುವುದಿಲ್ಲ. ಹೀಗಿದ್ದಾಗ ಒಂದು ಬದುಕು ಒಂದು ಹಂತ ಮೀರಿದ ಮೇಲೆ ಮಹಿಳೆಯರಿಗೆ ಖಿನ್ನತೆ, ಕೊರಗು ಕಾಡಲಾರಂಭಿಸುತ್ತದೆ, ಮಕ್ಕಳಾಗಲಿಲ್ಲವಲ್ಲಾ ಎಂಬ ಚಿಂತೆ ನಿತ್ಯವೂ ಕಾಡುತ್ತಿರುತ್ತದೆ.
ಆಧುನಿಕ ಶೈಲಿಯ ನಗರ ಬದುಕು: ಸಿಟಿ ಲೈಫು ಒಮ್ಮೆ ನೋಡಲು ಚೆಂದ, ಹಳ್ಳಿ ಬದುಕು ಅನುಭವಿಸಲು ಅಂದ ಎಂದು ನಮ್ಮ ಹಿರಿಯರು, ಅನುಭವಿಗಳು ಹೇಳುತ್ತಿರುತ್ತಾರೆ. ಇದು ನಿಜಕ್ಕೂ ಸತ್ಯವಾದ ಮಾತು. ಇಂದಿನ ಆಧುನಿಕ ಶೈಲಿಯ ಜೀವನಕ್ಕೆ ಮಾರುಹೋಗುವ ಯುವತಿಯರ ಜೀವನದಲ್ಲಿ ಸಮಸ್ಯೆಗಳ ಸರಮಾಲೆಯೇ ಬರುತ್ತವೆ. ಸಿಟಿ ಲೈಫು, ಎಂಜಾಯ್ ಮೆಂಟ್ ಎಂದು ಹರೆಯವನ್ನು ಕಳೆಯುವ ಯುವತಿಯರು ನಂತರ ಹತ್ತು ಹಲವು ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಸಮಸ್ಯೆಗಳ ಸುಳಿಯಿಂದ ಹೊರಬರಲಾರದೆ ಆತ್ಮಹತ್ಯೆ ಹಾದಿಯನ್ನು ತುಳಿಯುವ ಯುವತಿಯರು, ಹೆಣ್ಣು ಮಕ್ಕಳೂ ಸಾಕಷ್ಟಿದ್ದಾರೆ.
ಜೀವನ ನಡೆಸುವ ಕಲೆ: ಎಲ್ಲರಿಗೂ ತಿಳಿದಿರುವಂತೆ ಜೀವನ ನಡೆಸುವುದೊಂದು ಕಲೆ, ಹಣ, ಆಸ್ತಿ, ಅಂತಸ್ತು, ಸೌಂದರ್ಯ ಮೀರಿ ಹೆಣ್ಣಿನಲ್ಲಿ ತಾಳ್ಮೆ, ವಿವೇಚನೆ, ಜಾಣ್ಮೆ ಇದ್ದರೆ ಜೀವನ ಸರಿಯಾದ ಹಳಿಯಲ್ಲಿ ಸಾಗುತ್ತದೆ. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಡಿಗ್ರಿ ಮೇಲೆ ಡಿಗ್ರಿ ಪಡೆದು ಲಕ್ಷಗಟ್ಟಲೆ ಸಂಪಾದಿಸುವ ಮಹಿಳೆ ವೈಯಕ್ತಿಕ ಜೀವನದಲ್ಲಿ ಸೋಲುತ್ತಾಳೆ, ಮದುವೆಯಾದ ಮೇಲೆ ಗಂಡನೊಂದಿಗೆ ಹೊಂದಾಣಿಕೆ ಬರುವುದಿಲ್ಲ. ಇದಕ್ಕೆ ಮಹಿಳೆಯ ಆರ್ಥಿಕ ಸ್ವಾತಂತ್ರ್ಯ ಕಾರಣ ಒಂದಾಗಿದ್ದರೆ ಗಂಡನಾದವನ ದುಶ್ಚಟಗಳು, ದುರ್ವರ್ತನೆ, ದುರಭ್ಯಾಸಗಳು ಮತ್ತೊಂದು ಕಾರಣವಾಗುತ್ತದೆ.ಹೀಗಾಗಿ ಹಲವು ಹೆಣ್ಣುಮಕ್ಕಳು ಮದುವೆಯಾಗಿ ಪತಿಯಿಂದ ವಿಚ್ಛೇದನ ಪಡೆಯುವವರನ್ನು ನಾವಿಂದು ಸಾಕಷ್ಟು ನೋಡುತ್ತಿದ್ದೇವೆ. ವಿಚ್ಛೇದನ ಪಡೆದ ಮಹಿಳೆಯರು ಸಾಕಷ್ಟು ಖಿನ್ನತೆಯಿಂದ, ಹತ್ತುಹಲವು ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಾವು ನೋಡುತ್ತೇವೆ.
ಇದಕ್ಕೆ ಹೇಳುವುದು ನಮ್ಮ ಹಿರಿಯರು 'ಹೆಣ್ಣುಮಕ್ಕಳಿಗೆ ವಿದ್ಯೆಯ ಜೊತೆಗೆ ವಿವೇಕವಿರಬೇಕೆಂದು'. ಆಯಾಯ ವಯಸ್ಸಿಗೆ ಏನು ಆಗಬೇಕು, ಪ್ರಾಕೃತಿಕ ನಡೆ-ನುಡಿ, ಆಚರಣೆ, ಕ್ರಮಗಳು, ಜೀವನ ಸಾಗಿದರೆ ಹೆಣ್ಣುಮಕ್ಕಳ ಜೀವನ ಪಾವನವಾಗುತ್ತದೆ.