ಮಧೂರು: ಭೂಮಿ ಪುತ್ರರಾಗಿರುವ ಮೊಗೇರರು ಆರಾಧನೆ, ಆಚರಣೆಗಳ ಮೂಲಕ ಸಾಂಸ್ಕøತಿಕ ಮೌಲ್ಯಗಳಿಗೆ ಜೀವ ತುಂಬಿರುವುದಲ್ಲದೆ, ಮೂಲ ನಂಬಿಕೆಗಳಿಗೆ ಮಹತ್ವ ಕಲ್ಪಿಸಿರುವುದಾಗಿ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಅವರು ಶನಿವಾರ ಮಧೂರು ಗ್ರಾಮ ಪಂಚಾಯಿತಿ ಸನಿಹದ ಅಟಲ್‍ಜಿ ಕಮ್ಯೂನಿಟಿ ಸಭಾಂಗಣದಲ್ಲಿ ಮಧೂರು ಶ್ರೀಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ವತಿಯಿಂದ ಹೊರತರಲಾದ 'ಮದರು ಸಂಕಥನ' ಪುಸ್ತಕದ ಅನಾವರಣಗೊಳಿಸಿ ಮಾತನಾಡಿದರು. ಮೊಗೇರ ಸಮುದಾಯದ ಮಾತೆ ಮದರು ಹೆಸರಿನಲ್ಲಿ ಸಂಕಥನ ಲೋಕಾರ್ಪಣೆಯಾಗುವ ಮೂಲಕ ಮಹಾಮಾತೆ ಮದರು ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲಿದಂತಾಗಿದೆ ಎಂದು ತಿಳಿಸಿದರು.
ಶ್ರೀಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
'ಮದರು ಸಂಕಥನ' ಪುಸ್ತಕದ ಬಗ್ಗೆ ಕೃತಿರಚನಾಕಾರ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾಹಿತಿ ನೀಡಿದರು. ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ, ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಜಯದೇವ ಖಂಡಿಗೆ, ಡಾ. ಆಶಾಲತಾ ಚೇವಾರ್, ರಾಮಪ್ಪ ಮಂಜೇಶ್ವರ, ಜಯಂತಿ, ಸಿ.ಎಚ್ ಶ್ಯಾಮ ಚೇನಕ್ಕೋಡ್, ಡಿ.ಕೃಷ್ಣ ದರ್ಬೆತ್ತಡ್ಕ, ಜಯಾ ರಾಮಪ್ಪ, ಸುಂದರ ಮಾಳಂಗೈ, ಸುನಂದ ಟೀಚರ್ ಕುಂಬಳೆ, ಸುಜಾತಾ ಉಪಸ್ಥಿತರಿದ್ದರು. ಶ್ರೀಮದರು ಮಹಾಮಾತೆ ಮೊಗೇರ ಸಮಾಜ ಪ್ರಧಾನ ಕಾರ್ಯದರ್ಶಿ ಶಂಕರ ಡಿ.ಸ್ವಾಗತಿಸಿದರು. ಆನಂದ ಕೆ. ಮವ್ವಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಧಾಕರ ಬೆಳ್ಳಿಗೆ ವಂದಿಸಿದರು.