ತಿರುವನಂತಪುರಂ: ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೆಟ್ರೋ ಮ್ಯಾನ್ ಶ್ರೀಧರನ್ ಚುನಾವಣಾ ಕಣಕ್ಕಿಳಿದಿದ್ದು, ಪಾಲಕ್ಕಾಡ್ ಗೆ ಶ್ರೀಧರನ್ ಅವರು ಭೇಟಿ ನೀಡಿದ್ದ ಸಂದರ್ಭ ಜನರು ಅವರ ಕಾಲು ತೊಳೆದು ಆಶೀರ್ವಾದ ತೆಗೆದುಕೊಂಡಿದ್ದಾರೆ. ಈ ಫೋಟೊಗಳು ಇದೀಗ ವೈರಲ್ ಆಗಿವೆ.
ಶ್ರೀಧರನ್ ಅವರು ಭೇಟಿ ನೀಡಿದ್ದ ವೇಳೆ ಕೆಲವರು ಅವರ ಪಾದ ತೊಳೆದು ಬರಮಾಡಿಕೊಂಡಿದ್ದಾರೆ. ಅವರ ಕಾಲು ತೊಳೆಯುವ, ಹಾರ ಹಾಕುವ, ಮಹಿಳೆಯರನ್ನೊಳಗೊಂಡು ಹಲವು ಮಂದಿ ಅವರ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುತ್ತಿರುವ ಫೋಟೊಗಳು ವೈರಲ್ ಆಗಿವೆ.
ಈ ಘೋಟೊಗಳ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಚಿತ್ರಗಳಲ್ಲಿ ಜಾತೀಯತೆ ಹಾಗೂ ಶ್ರೀಮಂತವರ್ಗ ಎನ್ನುವುದು ಪ್ರತಿಫಲಿಸುತ್ತಿದೆ ಎಂದು ದೂರಲಾಗಿದೆ.
ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಮೆಟ್ರೋಮ್ಯಾನ್ ಇ ಶ್ರೀಧರನ್ ಅವರು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು, ಸಾಲದ ಸುಳಿಯಿಂದ ರಾಜ್ಯ ಹೊರ ಬರಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು, ಸಿಎಂ ಸ್ಥಾನಕ್ಕೂ ನಾನು ಸಿದ್ಧ ಎಂದು ಶ್ರೀಧರನ್ ಈಗಾಗಲೇ ಘೋಷಿಸಿದ್ದಾರೆ.
ಪಾಲಕ್ಕಾಡ್ ಚುನಾವಣಾ ಪ್ರಚಾರ ಪ್ರಾರಂಭವಾದಾಗಿನಿಂದ ಕ್ಷೇತ್ರದಾದ್ಯಂತ ಇ ಶ್ರೀಧರನ್ ಕ್ರಿಯಾಶೀಲರಾಗಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಪಾಲಕ್ಕಾಡ್ ಅನ್ನು ಕೇರಳದ ಅತ್ಯುತ್ತಮ ನಗರವನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದಾರೆ.
ಏಪ್ರಿಲ್ 6 ರಂದು ಕೇರಳದಲ್ಲಿ 140 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಕೇರಳದಲ್ಲಿ 140 ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮಿಕ್ಕ 25 ಸ್ಥಾನಗಳು ನಾಲ್ಕು ಮಿತ್ರಪಕ್ಷಗಳಿಗೆ ಹಂಚಿಕೆಯಾಗಿದೆ.