ನವದೆಹಲಿ: ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಭಾರತ ಹಾಗೂ ಅಮೆರಿಕ ಪ್ರಜಾಪ್ರಭುತ್ವ ಆಧಾರಿತ ದೇಶವಾಗಿದೆ, ಬದ್ಧತೆಯ ಹಂಚಿಕೆಯ ಮೌಲ್ಯಗಳಲ್ಲಿ ಬೇರೂರಿರುವ ಉಭಯ ದೇಶಗಳ ನಡುವಿನ ಆತ್ಮೀಯ ಮತ್ತು ನಿಕಟ ಸಂಬಂಧವನ್ನು ಪ್ರಧಾನಿ ಮೋದಿ ಈ ವೇಳೆ ಉಲ್ಲೇಖಿದ್ದಾರೆ.
ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರದ ಬದ್ಧತೆಯನ್ನು ಜೇಮ್ಸ್ ಆಸ್ಟಿನ್ ಪುನರುಚ್ಚರಿಸಿದ್ದಾರೆ. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಕಾರ್ಯತಂತ್ರದ ಸಹಭಾಗಿತ್ವ ಜೇಮ್ಸ್ ಒತ್ತಿ ಹೇಳಿದ್ದಾರೆ.
ಈ ಕುರಿತು ಖುದ್ದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಅವರೊಂದಿಗಿನ ಮಾತುಕತೆಯ ಬಗ್ಗೆ ತಿಳಿಸಿದ್ದಾರೆ. ಭಾರತ ಹಾಗೂ ಅಮೆರಿಕ ತಮ್ಮ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಬದ್ಧವಾಗಿದ್ದು, ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರಿಗೆ ಲಾಯ್ಡ್ ಜೇಮ್ಸ್ ಮೂಲಜಕ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ದು, ಭಾರತ-ಅಮೆರಿಕ ನಡುವಿನ ಗಾಢ ಸಂಬಂಧ ಬಿಡೆನ್ ಆಡಳಿತದಲ್ಲಿ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸ ಇರುವುದಾಗಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್, ಭಾರತದ ಪ್ರಧಾನಿ ಅವರೊಂದಿಗಿನ ಆತ್ಮೀಯ ಸಂವಾದ ಅತ್ಯಂತ ಖುಷಿ ನೀಡಿತು ಎಂದು ಹೇಳಿದ್ದಾರೆ.