ನವದೆಹಲಿ: ಕೆಲವು ಕಾರ್ಯಗಳನ್ನು ಕೈಗೊಳ್ಳಲು, ಇಲ್ಲವೇ ಬೇರೆಡೆ ಪ್ರಯಾಣಿಸಲು ರಾಜ್ಯ ಸರ್ಕಾರಗಳು ಜನರಿಗೆ ಕೊರೊನಾ ನೆಗೆಟಿವ್ ವರದಿ ನೀಡುವುದನ್ನು ಕಡ್ಡಾಯಗೊಳಿಸಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ವೆಬ್‌ಸೈಟ್ ಗಳು ನಕಲಿ ಕೊರೊನಾ ನೆಗೆಟಿವ್ ವರದಿ ಹಾಗೂ ಕೊರೊನಾ ಲಸಿಕಾ ಪ್ರಮಾಣ ಪತ್ರವನ್ನು ನೀಡಿ ದುಡ್ಡು ಮಾಡಿಕೊಳ್ಳಲು ಮುಂದಾಗಿವೆ.
ದೇಶದಲ್ಲಿ ಸದ್ದಿಲ್ಲದಂತೆ ಕೊವಿಡ್ ನಕಲಿ ಪ್ರಮಾಣ ಪತ್ರ ದಂಧೆ ಆರಂಭವಾಗಿದೆ ಎಂದು ಈಚೆಗೆ ನಡೆದ ಸಂಶೋಧನೆಯೊಂದು ತಿಳಿಸಿದೆ. ಕೊರೊನಾ ಪರೀಕ್ಷಾ ನೆಗೆಟಿವ್ ವರದಿಗೆ, ಕೊರೊನಾ ಲಸಿಕೆ ಪ್ರಮಾಣ ಪತ್ರಕ್ಕೆ, ಗ್ರೀನ್ ಪಾಸ್‌ಪೋರ್ಟ್‌ಗೆ ಇಂತಿಷ್ಟು ಎಂದು ಹಣ ನಿಗದಿ ಮಾಡಿ ವಸೂಲಿಗೆ ಇಳಿದಿವೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.
ಚೆಕ್ ಪಾಯಿಂಟ್ ರಿಸರ್ಚ್ ಎಂಬ ಸಂಸ್ಥೆ ಈ ಕುರಿತು ತನಿಖೆ ಕೈಗೊಂಡಿದ್ದು, ಹಲವು ವೆಬ್‌ಸೈಟ್‌ಗಳು ಈ ಕರಾಳ ದಂಧೆಯಲ್ಲಿ ತೊಡಗಿಕೊಂಡಿವೆ ಎಂದು ವರದಿ ಮಾಡಿದೆ. ಥೇಟ್ ಕೊರೊನಾ ಪ್ರಮಾಣಪತ್ರಗಳನ್ನೇ ಹೋಲುವಂತೆ ನಕಲಿ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ ಎಂದು ಹೇಳಿದೆ.
ತಮ್ಮ ಮಾಹಿತಿ ಹಾಗೂ ಹಣವನ್ನು ಈ ವೆಬ್ ಸೈಟ್ ಗಳಿಗೆ ಕಳುಹಿಸಿದರೆ ಸಾಕು, ಕೆಲವೇ ಗಂಟೆಗಳಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ಕಳುಹಿಸುತ್ತವೆ. ಜೊತೆಗೆ ಈ ಕುರಿತು ಜಾಹೀರಾತುಗಳು ರಾಜಾರೋಷವಾಗಿ ಕಾಣಿಸಿಕೊಳ್ಳುತ್ತಿವೆ. ಕೆಲವು ಸೈಟ್‌ಗಳು ವಿನಾಯಿತಿಯನ್ನೂ ಘೋಷಿಸುತ್ತಿವೆ. ಈ ಕುರಿತು ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.