ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ಕೋರಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಲಿಂಗ ಅಸಮಾನತೆಯನ್ನು ತೊಡೆದುಹಾಕಲು, ಸಮಾನತೆಯನ್ನು ಉತ್ತೇಜಿಸಲು ಸಾಮೂಹಿಕವಾಗಿ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.
ʼಎಲ್ಲ ನಾಗರಿಕರಿಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಮಹಿಳೆಯರು ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ದಾಖಲೆಗಳನ್ನು, ಸಾಧನೆಗಳನ್ನು ಮಾಡುತ್ತಿದ್ದಾರೆ. ಲಿಂಗ ಸಮಾನತೆಯನ್ನು ಉತ್ತೇಜಿಸಲು ಹಾಗೂ ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯನ್ನು ತೊಡೆದುಹಾಕಲು ಒಟ್ಟಾಗಿ ಸಂಕಲ್ಪ ಮಾಡೋಣʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಸಂಭ್ರಮಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಸಮಾಜದಿಂದ ಎದುರಾಗುವ ವಿವಿಧ ಸವಾಲುಗಳ ಹೊರತಾಗಿಯೂ ಮಹಿಳೆಯರು ಪ್ರಪಂಚದಾದ್ಯಂತದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವ ಮಹಿಳೆಯರನ್ನು ಈ ದಿನ ಸ್ಮರಿಸಲಾಗುತ್ತದೆ.