ಬದಿಯಡ್ಕ: ನೀರ್ಚಾಲು ಸಮೀಪದ ಬೇಳದಲ್ಲಿ ಪ.ಜಾತಿ ಮತ್ತು ವರ್ಗದ ಸರ್ಕಾರಿ ಐಟಿಐಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಪೂರ್ಣಗೊಂಡು ಕಳೆದ ಜ.11 ರಂದು ಸ್ವತಃ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು. ಒಂದು ಕೋಟಿ ರೂ.ಬೃಹತ್ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಏಕಮಾತ್ರ ಕೋರ್ಸ್ ನಡೆಯುತ್ತಿದ್ದು, ಇದೀಗ ಚರ್ಚೆಗೂ ಗ್ರಾಸವಾಗಿದೆ. ಇಲ್ಲಿ ಇನ್ನಷ್ಟು ಹೆಚ್ಚಿನ ಬೋಧನಾ ತರಗತಿಗಳು ಬೇಕೆಂಬ ಬೇಡಿಕೆ ಕೇಳಿ ಬಂದಿದೆ.ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ವೆಲ್ಡರ್ ಕೋರ್ಸ್ ಮಾತ್ರ ಲಭ್ಯವಿರಲಿದೆ.40 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶವಿರುವ ಇಲ್ಲಿ ಆಸಕ್ತರು ಬಹಳಷ್ಟು ವಿದ್ಯಾರ್ಥಿಗಳಿದ್ದರೂ ವ್ಯವಸ್ಥೆಯಲ್ಲಿ ಅವಕಾಶವಿಲ್ಲದಿರುವುದರಿಂದ ಸಮಸ್ಯೆಗಳಾಗಿವೆ.
1959 ರಲ್ಲೇ ಹರಿಜನ ಇಲಾಖೆಯ ಅಧೀನದಲ್ಲಿ ಇಲ್ಲಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಮರ, ನೇಯ್ಗೆ ವೃತ್ತಿಗೆ ಆರಂಭದಲ್ಲಿ ತರಬೇತಿ ನೀಡಲಾಗುತ್ತಿತ್ತು. 1975 ರಿಂದ ಪ್ರೊಡಕ್ಷನ್ ಕಂ ಟ್ರೈನಿಂಗ್ ಕೇಂದ್ರವಾಯಿತು. ಬಳಿಕ 2009ರಲ್ಲಿ ಐಟಿಸಿ ಕಾರ್ಯಾರಂಭಗೊಂಡಿತು. 2012ರಲ್ಲಿ ಐಟಿಐ ಆಗಿ ಮಾರ್ಪಾಡುಗೊಂಡಿತು. 2018ರಲ್ಲಿ ಮಾನ್ಯತೆಪಡೆದು ಎನ್.ಸಿ.ವಿ.ಟಿ. ತರಬೇತಿಗಳು ಆರಂಭಗೊಂಡಿತು. 2019ರಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಸೈಟ್ ನಲ್ಲಿ ಭಾಗವಹಿಸಿದ್ದ 29 ಟ್ರೈನಿಗಳು ತೇರ್ಗಡೆಯಾಗಿದ್ದರು.
ಇದೀಗ ನಿರ್ಮಿಸಲಾಗಿರುವ ನೂತನ ಕಟ್ಟಡ ವಿಸ್ತರಿಸಿ ನೂತನ ಕೋರ್ಸ್‍ಗಳನ್ನು ಮಂಜೂರುಗೊಳಿಸಬೇಕೆಂದು ತೀವ್ರ ಬೇಡಿಕೆಗಳು ವ್ಯಕ್ತವಾಗಿದೆ. ಪ.ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. 1000 ರೂ.ಲ್ಯಾಪ್ಸಂ ಗ್ರಾಂಟ್, ಸಮವಸ್ತ್ರಕ್ಕೆ 900 ರೂ., ತಿಂಗಳ ಗೌರವಧನ 830 ರೂ. ನೀಡಲಾಗುತ್ತಿದೆ. ಪ್ರತಿದಿನ ಪೋಷಕಾಹಾರ ಯೋಜನೆ ಅನುಸಾರ ಬೆಳಿಗ್ಗೆ ಮೊಟ್ಟೆ ಹಾಗೂ ಹಾಲು, ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಶೇ.80 ಪ.ಜಾತಿ ಹಾಗೂ ಶೇ.10 ಪ.ವರ್ಗ ಮತ್ತು ಶೇ.10 ಇತರ ವಿಭಾಗಗಳು ಎಂಬ ಅನುಪಾತದಲ್ಲಿ ಇಲ್ಲಿ ತರಬೇತಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಪ.ಜಾತಿ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೂರು ತರಬೇತಿ ಸಂಸ್ಥೆಗಳಿವೆ. ಆದರೆ ಮಂಜೇಶ್ವರ, ಕಾಸರಗೋಡು ತಾಲೂಕಿನ ಪ.ಜಾತಿ, ವಿಭಾಗದವರಿಗೆ ಬೇಳದ ಕೇಂದ್ರವೊಂದೇ ಆಶ್ರಯ.! ಪ್ರಸ್ತುತ 29 ವಿದ್ಯಾರ್ಥಿಗಳು ವ್ಯಾಸಂಗ ಪಡೆಯುತ್ತಿದ್ದಾರೆ.
ಕುಂಬಳೆ-ಬದಿಯಡ್ಕ ರಸ್ತೆಯ ನೀರ್ಚಾಲು ಸಮೀಪದ ಬೇಳದಲ್ಲಿ 92 ಸೆಂಟ್ ಜಾಗದಲ್ಲಿ ಐಟಿಐ ಕಾರ್ಯನಿರ್ವಹಿಸುತ್ತಿದೆ.
ಹೈಲೈಟ್ಸ್:
ನೂತನ ಅಕಾಡೆಮಿಕ್ ಕಟ್ಟಡಕ್ಕೆ ಮಂಜೂರಾದ ಒಂದು ಕೋಟಿ ರೂ.ಮೊತ್ತದಲ್ಲಿ 1,36, 874 ರೂ.,ಬಳಸಿ ಜಲ ಲಭ್ಯತೆ ಮತ್ತು 98 ಲಕ್ಷ ರೂ. ಬಳಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ವೆಲ್ಡರ್ ಟ್ರೇಡ್ ನ ಯಂತ್ರಗಳನ್ನು ಅಳವಡಿಸಿ ಮಾಡರ್ನ್ ಟೂಲ್ಸ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು 13.50 ಲಕ್ಷ ರೂ.ವೆಚ್ಚದಲ್ಲಿ ವಿದ್ಯುತ್ತೀಕರಣ ನಡೆಸಲಾಗಿದೆ. ಎಲ್ಲಾ ಯಂತ್ರಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಸಜ್ಜುಗೊಳಿಸಿದ ವೆಲ್ಡರ್ ವರ್ಕ ಶಾಪ್, ಕಂಪ್ಯೂಟರ್, ಪ್ರಾಂಶುಪಾಲರ ಕಚೇರಿ, ನೌಕರರ ಕೊಠಡಿ, ತರಗತಿ ಕೊಠಡಿ, ಗ್ರಂಥಾಲಯಗಳನ್ನು ನಿರ್ಮಿಸಲಾಗಿದೆ. ಸೋಲಾರ್ ವ್ಯವಸ್ಥೆಯೂ ಇದೆ. ಜ.11 ರಂದು ಈ ಕಟ್ಟಡವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದ್ದರು.
ಅಭಿಮತ:
ಬೇಳದ ಐಟಿಐ ಬಹಳಷ್ಟು ಸಾಧ್ಯತೆಗಳಿರುವ ತರಬೇತಿ ಕೇಂದ್ರವಾಗಿದೆ. ಈಗ ನಿರ್ಮಿಸಿರುವ ಕಟ್ಟಡದ ಮೇಲ್ಬದಿ ಇನ್ನಷ್ಟು ತರಬೇತಿಗಳನ್ನು ಆರಂಭಿಸಲು ಸಾಧ್ಯ. ಆದರೆ ಈ ಪ್ರದೇಶದಲ್ಲಿ ಹೆಚ್ಚು ಬೇಡಿಕೆ ಇರುವ, ಹೆಚ್ಚು ಉದ್ಯೋಗ ಸಾಧ್ಯತೆ ಇರುವ ತರಬೇತಿಯ ಬಗ್ಗೆ ಸರ್ವೇ ನಡೆಸಿ ಆ ತರಬೇತಿಯ ನಿರ್ವಹಣೆಗೆ ಬೇಕಾದ ಪ್ರಾಕ್ಟಿಕಲ್ ತರಗತಿ ಮತ್ತಿತರ ಅಂದಾಜು ವೆಚ್ಚಗಳನ್ನು ಗುರುತಿಸಿ ಸರ್ಕಾರಕ್ಕೆ ಯೋಜನೆ ಸಲಲಿಸಬೇಕು. ಬಳಿಕ ಕೊಠಡಿಗಳು ಮಂಜೂರುಗೊಂಡು, ನಿರ್ಮಾಣ ಕಾರ್ಯ ನಡೆಸಿ ತರಗತಿ ಆರಂಭಿಸಬಹುದು. ಈ ಪ್ರದೇಶಕ್ಕೆ ಸಂಬಂಧಿಸಿ ಡ್ರಾಪ್ಟ್‍ಮೆನ್ ಸಿವಿಲ್ ತರಗತಿಗಳಿಗೆ ಹೆಚ್ಚು ಆದ್ಯತೆ ಇದ್ದು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಸಾಮಾಜಿಕ, ರಾಜಕೀಯ ಪ್ರಮುಖರ ನೆರವು, ಬೆಂಬಲ ಬೇಕಾಗುತ್ತದೆ.
ರಾಜೇಶ್ ಬಾಬು.
ಪ್ರಾಂಶುಪಾಲರು. ಬೇಳ ಸರ್ಕಾರಿ ಐಟಿಐ.