ಬದಿಯಡ್ಕ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮಾತ್ರ ಕೇರಳವು ದೇವರ ನಾಡಾಗಿ ಉಳಿಯಲಿದೆ. ಪ್ರಸ್ತುತ ಕೇರಳದಲ್ಲಿ ಬದಲಾವಣೆಯ ಗಾಳಿ ಬೀಸುತ್ತಾ ಇದೆ. ದೇಶಕಟ್ಟುವ ಶ್ರೀಮಂತವಾದ ಚಿಂತನೆಯನ್ನು ಹೊಂದಿದ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷವಾಗಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಭಾರತೀಯ ಜನತಾ ಪಕ್ಷದ ಕಾಸರಗೋಡು ವಿದಾನಸಭಾ ಕ್ಷೇತ್ರದ ಬದಿಯಡ್ಕ ಪಂಚಾಯಿತಿ ಮಟ್ಟದ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಡಿನಾಡಿನ ಜನತೆಗೋಸ್ಕರ ಧ್ವನಿ ಎತ್ತಿದ ಕೇರಳ ರಾಜಕೀಯದ ಏಕೈಕ ನಾಯಕ ಕೆ.ಶ್ರೀಕಾಂತ್ ಆಗಿದ್ದಾರೆ. ನಮ್ಮ ಸನಾತನ ಸಂಸ್ಕøತಿ ಪರಂಪರೆಯ ಮೇಲೆ ಕೇರಳ ರಾಜ್ಯದಲ್ಲಿ ಧಾಳಿ ನಡೆಯುತ್ತಿದೆ. ಆದುದರಿಂದ ರಾಜ್ಯವು ಬದಲಾವಣೆಯನ್ನು ಕಾಣಬೇಕಿದೆ. ಈ ನಿಟ್ಟಿನಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು ಎಂದು ತಿಳಿಸಿದ ಅವರು ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ವಿವಿಧ ರಾಷ್ಟ್ರಗಳಿಂದ ಎದುರಾದ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರುಸಿ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರೈತರ ಹಿತಕ್ಕಾಗಿ ಅನೇಕ ಕಾರ್ಯಗಳನ್ನು ಕೇಂದ್ರ ಸರಕಾರವು ಕೈಗೆತ್ತಿಕೊಂಡಿದೆ ಎಂದರು.
ಕಾಸರಗೋಡು ವಿದಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ 45 ವರ್ಷಗಳಿಂದ ಪ್ರಗತಿಯನ್ನು ಕಾಣದ ಕಾಸರಗೋಡು ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಬಿಜೆಪಿಯಿಂದ ಮಾತ್ರ ಸಾಧ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದಲ್ಲಿ ಕರ್ನಾಟಕದ ವಿವಿಧ ಪ್ರಾಧಿಕಾರ ಹಾಗೂ ಕೇಂದ್ರಸರಕಾರದಿಂದ ಜಿಲ್ಲೆಗೆ ವಿಶೇಷ ಅನುದಾನವನ್ನು ಒದಗಿಸುವಲ್ಲಿ ಪ್ರತ್ಯೇಕ ಮುತುವರ್ಜಿಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆಯನ್ನು ನೀಡಿದರು.
ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ.ಶಂಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ಮಂಡಲ ಪ್ರ.ಕಾರ್ಯದರ್ಶಿ ಸುನಿಲ್ ಪಿ.ಆರ್. ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಯುಡಿಎಫ್ ಹಾಗೂ ಎಲ್‍ಡಿಎಫ್ ಆಡಳಿತದಿಂದ ಜಿಲ್ಲೆಯು ಅವನತಿಯತ್ತ ಸಾಗುತ್ತಿದೆ. ರಸ್ತೆ, ಆರೋಗ್ಯ ಮೊದಲಾದ ವಲಯಗಳಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡಿದೆ ಎಂದರು. ಚುನಾವಣಾ ಉಸ್ತುವಾರಿ ಸತೀಶ್ ಕುಂಪಲ ಮಾತನಾಡಿ ಇನ್ನು ಇವರು ಕೇವಲ 15 ದಿನಗಳ ಅವಕಾಶವನ್ನು ಕಾರ್ಯಕರ್ತರು ಸದುಪಯೋಗಪಡಿಸಿಕೊಂಡು ಜನರತ್ತ ತೆರಳಬೇಕಿದೆ. ನಿಮ್ಮ ಶ್ರಮದಿಂದ ನಮ್ಮೆಲ್ಲರ ಕನಸು ನನಸಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕ್ರಿಶ್ಚಿಯನ್ ಸಮುದಾಯಕ್ಕೆ ವಿಶೇಷ ಅನುದಾನವನ್ನು ಕಲ್ಪಿಸಿದೆ ಎಂದರು. ಪಕ್ಷದ ನೇತಾರರಾದ ರಾಮಪ್ಪ ಮಂಜೇಶ್ವರ, ಕೆ.ಎನ್.ಕೃಷ್ಣ ಭಟ್, ಈಶ್ವರ ಮಾಸ್ತರ್ ಪೆರಡಾಲ, ಹರೀಶ್ ನಾರಂಪಾಡಿ, ಜಗದೀಶ್, ಜಗನ್ನಿವಾಸ, ಚಂದ್ರಶೇಖರ, ಸುಕುಮಾರ ಕುದ್ರೆಪ್ಪಾಡಿ, ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವಿನಾಶ್ ರೈ ಸ್ವಾಗತಿಸಿ, ಮಹೇಶ್ ವಳಕ್ಕುಂಜ ವಂದಿಸಿದರು.