ನವದೆಹಲಿ: ಕಾಂಗ್ರೆಸ್ಸ್ ಮುಖಂಡ ಕೆ.ಮುರಳೀಧರನ್ ನೇಮಂ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ ಚುನಾವಣೆಗೆ ಮುನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸತ್ ಚುನಾವಣೆಯಲ್ಲಿ ಸಂಸದರಾಗಿ ಇದ್ದುಕೊಂಡು ವಿಧಾನ ಸಭೆಗೆ ಸ್ಪರ್ಧಿಸುವುದು ಜನರಿಗೆ ಎಸಗುವ ದ್ರೋಹವೆಂದು ನೇಮಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಅವರ ಹೇಳಿಕೆಯ ಬೆನ್ನಿಗೆ ಈ ಬಗ್ಗೆ ಕೆ.ಮುರಳೀಧರನ್ ಪ್ರತಿಕ್ರಿಯಿಸಿ ಮಾತನಾಡಿದರು.
ವಿಧಾನ ಸಭಾ ಸ್ಪರ್ಧೆಯಲ್ಲಿ ಗೆದ್ದ ಬಳಿಕವಷ್ಟೇ ಲೋಕಸಭೆಗೆ ಉಪಚುನಾವಣೆ ನಡೆಯುತ್ತದೆ. ಆದ್ದರಿಂದ ಸಂಸದ ಸ್ಥಾನಕ್ಕೆ ಈಗ ರಾಜೀನಾಮೆ ನೀಡುವುದಿಲ್ಲ. ನೇಮಂ ಕ್ಷೇತ್ರ ಕಾಂಗ್ರೆಸ್ಸ್ ನ ನಿಶ್ಚಿತವಾದ ಸ್ಥಾನವಲ್ಲ. ಈ ಬಾರಿ ಹೋರಾಟ ಕೋಮುವಾದದ ವಿರುದ್ಧವಾಗಿದೆ ಎಂದು ಮುರಲೀಧರನ್ ಸುದ್ದಿಗಾರರಿಗೆ ತಿಳಿಸಿದರು. ಉತ್ತಮ ಸಾಧನೆಯೊಂದಿಗೆ ಯಶಸ್ವಿಯಾಗುವುದು ಮೊದಲ ಗುರಿ ಎಂದರು.
ತಾನು ನೇಮಂ ಕ್ಷೇತ್ರದ ಬಗ್ಗೆ ಹೆಚ್ಚು ತಿಳುವಳಿಕೆ ಇರುವ ವ್ಯಕ್ತಿಯಾಗಿರುವುದರಿಂದಲೇ ವಿಧಾನ ಸಭೆ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ. ವಟ್ಟಿಯೂರ್ಕವು ನೇಮಂಗೆ ಸಮೀಪದಲ್ಲಿರುವ ಒಂದು ಕ್ಷೇತ್ರವಾಗಿದೆ. ಅದನ್ನೂ ಗಮನಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕೆ.ಮುರಳೀಧರನ್ ಹೇಳಿದರು. ಕ್ಷೇತ್ರದ ವಿವಾದಗಳನ್ನು 24 ಗಂಟೆಗಳ ಒಳಗೆ ಬಗೆಹರಿಸಬಹುದು. ಇದು ಕಾಂಗ್ರೆಸ್ ಗೆ ಸಾಮಾನ್ಯ ವಿದ್ಯಮಾನವಾಗಿದ್ದು, ಹೊಸದಲ್ಲ ಎಂದರು.
ಕುಮ್ಮನಂ ರಾಜಶೇಖರನ್ ಮತ್ತು ವಿ. ಮುರಳೀಧರನ್ ಅವರು ಎದುರಾಳಿಗಳಾಗಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಮುರಳೀಧರನ್ ಅವರು, ಗೆಲುವಿನ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿರುವೆ ಎಂದಷ್ಟೇ ಹೇಳಿದರು. ಯುಡಿಎಫ್ ಗೆಲುವು ಸಾಧಿಸಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಹೇಳಿದರು.
ತನಗೆ ಸ್ಥಾನ ನೀಡಿಲ್ಲ ಎಂದು ಕೇಶಮುಂಡನ ಮಾಡಿರುವ ಲತಿಕಾ ಸುಭಾಷ್ ಅವರ ಕ್ರಮ ಒಪ್ಪತಕ್ಕದ್ದಲ್ಲ. ಪೋಷಕ ಸಂಘಟನೆಯ ಅಧ್ಯಕ್ಷರಿಗೆ ಸ್ಥಾನ ಸಿಗಲಿಲ್ಲ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಈ ರೀತಿಯ ನಡೆ ಅಗತ್ಯವಿರಲಿಲ್ಲ ಎಂದು ಮುರಲೀಧರನ್ ಹೇಳಿದರು.