ನವದೆಹಲಿ: ಕೇಂದ್ರ ಸರಕಾರವು ಇತ್ತೀಚಿಗೆ ತಂದಿರುವ 'ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021'ರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ),ಈ ನಿಯಮಗಳು ಡಿಜಿಟಲ್ ಮಾಧ್ಯಮಗಳ ಮೂಲ ಸ್ವರೂಪವನ್ನೇ ಬದಲಿಸುತ್ತವೆ ಮತ್ತು ಅವುಗಳ ಮೇಲೆ ಅಸಮಂಜಸ ನಿರ್ಬಂಧಗಳನ್ನು ಹೇರುತ್ತವೆ,ಆದ್ದರಿಂದ ಸರಕಾರವು ಈ ನಿಯಮಗಳನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.
'ಮುಕ್ತ ಸಾಮಾಜಿಕ ಮಾಧ್ಯಮಗಳ 'ನಿಯಂತ್ರಣದ ಹೆಸರಿನಲ್ಲಿ ಸರಕಾರವು ಮುಕ್ತ ಮಾಧ್ಯಮಗಳಿಗಾಗಿ ಭಾರತದ ಸಂವಿಧಾನವು ಒದಗಿಸಿರುವ ಸುರಕ್ಷತೆಯನ್ನು ಕಿತ್ತುಕೊಳ್ಳುವಂತಿಲ್ಲ ಎಂದಿರುವ ಇಜಿಐ,ನೂತನ ನಿಯಮಗಳು ಸುದ್ದಿ ಪ್ರಕಾಶಕರು ಅಂತರ್ಜಾಲದಲ್ಲಿ ಕಾರ್ಯಾಚರಿಸುವ ರೀತಿಯನ್ನು ಮೂಲಭೂತವಾಗಿ ಬದಲಿಸುತ್ತವೆ ಮತ್ತು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಡೆಗಣಿಸುವ ಅಪಾಯವಿದೆ ಎಂದಿದೆ.
ಪರಿಷ್ಕೃತ ನಿಯಮಗಳು ಸರಕಾರಕ್ಕೆ ನೀಡಿರುವ ಅಪರಿಮಿತ ಅಧಿಕಾರದ ಬಗ್ಗೆಯೂ ಕಳವಳಗಳನ್ನು ವ್ಯಕ್ತಪಡಿಸಿರುವ ಗಿಲ್ಡ್, ಈ ನಿಯಮಗಳು ಯಾವುದೇ ನ್ಯಾಯಾಂಗ ಮೇಲ್ವಿಚಾರಣೆಯಿಲ್ಲದೆ ದೇಶದ ಯಾವುದೇ ಭಾಗದಲ್ಲಿ ಪ್ರಕಟಿತ ಸುದ್ದಿಯನ್ನು ತಡೆಗಟ್ಟಲು,ಅಳಿಸಲು ಮತ್ತು ಪರಿಷ್ಕರಿಸಲು ಸರಕಾರಕ್ಕೆ ಅಧಿಕಾರ ನೀಡುತ್ತವೆ ಮತ್ತು ಎಲ್ಲ ಪ್ರಕಾಶಕರು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದಿದೆ.
ನೂತನ ಸುಧಾರಣೆಗಳನ್ನು ತರುವ ಮುನ್ನ ಸರಕಾರವು ಮಾಧ್ಯಮಗಳೊಂದಿಗೆ ಸಮಾಲೋಚಿಸಿಲ್ಲ,ಹೀಗಾಗಿ ಅದು ನಿಯಮಗಳನ್ನು ಅಮಾನತಿನಲ್ಲಿರಿಸಬೇಕು ಮತ್ತು ಎಲ್ಲ ಪಾಲುದಾರರೊಂದಿಗೆ ಅರ್ಥಪೂರ್ಣ ಸಮಾಲೋಚನೆಯನ್ನು ನಡೆಸಬೇಕು ಎಂದು ಇಜಿಐ ಹೇಳಿದೆ.