ತಿರುವನಂತಪುರ : ಚಿನ್ನ ಮತ್ತು ಡಾಲರ್ ಕಳ್ಳಸಾಗಾಣಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈ.ಡಿ) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ವಿಚಾರಣೆಗೆ ಶಿಫಾರಸು ಮಾಡುವ ಕೇರಳ ಸರಕಾರದ ನಿರ್ಧಾರವು ದುರದೃಷ್ಟಕರವಾಗಿದೆ ಮತ್ತು ಸಂವಿಧಾನದ ಒಕ್ಕೂಟ ಸ್ವರೂಪಕ್ಕೆ ಒಂದು ಸವಾಲು ಆಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರವಿವಾರ ಇಲ್ಲಿ ಹೇಳಿದರು. ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ಬಗ್ಗೆ ನಮ್ಮ ನಿಲುವು ದೃಢವಾಗಿದ್ದು,ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಅದನ್ನು ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು. ಬಿಜೆಪಿಯ ಚುನಾವಣಾ ಪ್ರಣಾಳಿಕೆಯು ಯುಸಿಸಿಯನ್ನು ಒಳಗೊಂಡಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಎನ್ಡಿಎ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಕೇರಳದಲ್ಲಿರುವ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಹೆಚ್ಚುತ್ತಿರುವ ಇಂಧನ ಬೆಲೆಗಳ ಕುರಿತಂತೆ ಅವರು,ಪೆಟ್ರೋಲ್ ಮೇಲಿನ ತೆರಿಗೆಯನ್ನು ತಗ್ಗಿಸುವಂತೆ ಕೇಂದ್ರವು ಎಲ್ಲ ರಾಜ್ಯಗಳಿಗೆ ಮನವಿ ಮಾಡಿಕೊಂಡಿದೆ ಎಂದರು. ಕಳ್ಳಸಾಗಾಣಿಕೆ ಪ್ರಕರಣಗಳ ಕುರಿತಂತೆ ಸಿಂಗ್,ಈ.ಡಿ.ಪ್ರಕರಣದ ತನಿಖೆಯನ್ನು ನಡೆಸುತ್ತಿದೆ ಮತ್ತು ಅದರ ವಿರುದ್ಧ ವಿಚಾರಣೆಗಾಗಿ ನ್ಯಾಯಾಂಗ ಆಯೋಗವೊಂದನ್ನು ನೇಮಿಸಲಾಗಿದೆ ಎಂದು ತನಗೆ ತಿಳಿದುಬಂದಿದೆ. ಇದು ಅತ್ಯಂತ ದುರದೃಷ್ಟಕರವಾಗಿದೆ. ಇದರರ್ಥ ರಾಜ್ಯ ಸರಕಾರವು ಸಂವಿಧಾನದ ಒಕ್ಕೂಟ ಸ್ವರೂಪವನ್ನು ಪ್ರಶ್ನಿಸುತ್ತಿದೆ ಮತ್ತು ಇದು ಸಂವಿಧಾನಕ್ಕೆ ಶೇ.100ರಷ್ಟು ವಿರುದ್ಧವಾಗಿದೆ ಎಂದರು.
ಕೇರಳ ಕ್ರೈಂ ಬ್ರಾಂಚ್ ಈ.ಡಿ.ಯ ಕೆಲವು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರಕಾರವು ಈ.ಡಿ.ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ವಿಚಾರಣೆಗೆ ಆದೇಶಿಸಲು ನಿರ್ಧರಿಸಿತ್ತು. ಈ.ಡಿ. ಚಿನ್ನ ಕಳ್ಳಸಾಗಾಣಿಕೆ ಮತ್ತು ಡಾಲರ್ ಹಗರಣಗಳಲ್ಲಿ ತನಿಖೆಯ ದಾರಿಯನ್ನು ತಪ್ಪಿಸುತ್ತಿದೆ ಎನ್ನುವುದು ಅದರ ಆರೋಪವಾಗಿದೆ.
ಚಿನ್ನದ ಹಗರಣವು 2020 ಜುಲೈನಲ್ಲಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕರಿಗೆ ಸೇರಿದ ಲಗೇಜ್ನಿಂದ 14.82 ಕೋ.ರೂ.ಮೌಲ್ಯದ ಸುಮಾರು 30 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದರೆ ಡಾಲರ್ ಹಗರಣವು ತಿರುವನಂತಪುರದಲ್ಲಿಯ ಯುಎಇ ದೂತಾವಾಸದ ಮಾಜಿ ಹಣಕಾಸು ಮುಖ್ಯಸ್ಥರಿಂದ ಓಮಾನ್ ನ ಮಸ್ಕತ್ ಗೆ 1,90,000 ಅಮೆರಿಕನ್ ಡಾಲರ್ (ಸುಮಾರು 1.30 ಕೋ.ರೂ)ಗಳ ಕಳ್ಳ ಸಾಗಾಣಿಕೆ ಆರೋಪಕ್ಕೆ ಸಂಬಂಧಿಸಿದೆ. ಈ.ಡಿ.ಯ ಜೊತೆಗೆ ಕಸ್ಟಮ್ಸ್ ಮತ್ತು ಎನ್‌ಐಎ ಕೂಡ ಈ ಹಗರಣಗಳ ಕುರಿತು ತನಿಖೆ ನಡೆಸುತ್ತಿವೆ.
ಎಲ್ಡಿಎಫ್ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ದಾಳಿ ನಡೆಸಿದ ಸಿಂಗ್,'ಶೇ.100ರಷ್ಟು ಸಾಕ್ಷರತೆಯನ್ನು ಹೊಂದಿದ್ದರೂ ಹಲವಾರು ಕ್ಷೇತ್ರಗಳಲ್ಲಿ ಕೇರಳವು ಇತರ ರಾಜ್ಯಗಳಿಗಿಂತ ಹಿಂದುಳಿದಿದೆ. ದೇಶಕ್ಕೆ ಸ್ವಾತಂತ್ರ ದೊರಕಿ ಏಳು ದಶಕಗಳು ಕಳೆದಿದ್ದರೂ ಎಲ್ಡಿಎಫ್ ಮತ್ತು ಯುಡಿಎಫ್ ಹಿಡಿತಗಳಿಂದ ರಾಜ್ಯವು ಹೊರಬರದಿರುವದು ಇದಕ್ಕೆ ಮುಖ್ಯ ಕಾರಣವಾಗಿದೆ. ರಾಜ್ಯಕ್ಕೆ ನೂತನ ರಾಜಕೀಯ ಪರ್ಯಾಯದ ಅಗತ್ಯವಿದೆ ಮತ್ತು ಬಿಜೆಪಿ ಮಾತ್ರ ಅದನ್ನು ನೀಡಬಲ್ಲದು. ಯುಡಿಎಫ್ ಮತ್ತು ಎಲ್ಡಿಎಫ್ ಸ್ನೇಹಪರ ಪಂದ್ಯಗಳನ್ನು ಆಡುತ್ತಿವೆ. ಅವೆರಡರ ಪೈಕಿ ಒಂದು ಪಂದ್ಯವನ್ನು ಗೆಲ್ಲುತ್ತದೆ,ಆದರೆ ಜನರು ಸೋಲನ್ನನುಭವಿಸುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಕಾದಾಡುತ್ತಿದ್ದಾರೆ,ಆದರೆ 2,000 ಕಿ.ಮೀ.ದೂರದಲ್ಲಿ ಅವು ಒಂದಾಗಿ ನಮ್ಮ ವಿರುದ್ಧ ಹೋರಾಡುತ್ತಿವೆ' ಎಂದರು.
ಎರಡೂ ರಂಗಗಳು ಸುಳ್ಳು ಭರವಸೆಗಳನ್ನು ನೀಡುತ್ತಿವೆ ಮತ್ತು ಕೇರಳದ ಜನತೆಯ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲಗೊಂಡಿವೆ. ಇವರಡೂ ರಂಗಗಳ ತುಷ್ಟೀಕರಣ ನೀತಿಗಳು ಕೇರಳವನ್ನು ಅಭಿವೃದ್ಧಿ ಪಥದಿಂದ ದೂರಕ್ಕೊಯ್ದಿವೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಹರಿಹಾಯ್ದ ಸಿಂಗ್,ದಿಲ್ಲಿಯಲ್ಲಿ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರೂಪಿಸುವುದಾಗಿ ಅವರು ಯಾವಾಗಲೂ ಭರವಸೆ ನೀಡುತ್ತಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 2019ರಷ್ಟು ಹಿಂದೆಯೇ ಈ ಸಚಿವಾಲಯವನ್ನು ರೂಪಿಸಿರುವುದು ಬಹುಶಃ ಅವರಿಗೆ ಗೊತ್ತಿಲ್ಲ ಎಂದರು.