ಮಂಗಳೂರು: ಕೇರಳ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ದರೋಡೆ ಮಾಡಿದ್ದ ತಂದ ಚಿನ್ನವನ್ನು ಕರ್ನಾಟಕಕ್ಕೆ ತಂದು ಅಡವಿಟ್ಟಿತ್ತು.
ಪುತ್ತೂರಿನ ಕಾಣಿಯೂರಿನಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಮೂವರ ತಂಡ ಕೇರಳದಲ್ಲಿ ದರೋಡೆ ಮಾಡಿತ್ತು. ಅಲ್ಲಿ ಸಿಕ್ಕ ಚಿನ್ನವನ್ನು ಕಡಬ ತಾಲೂಕಿನ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಡಮಾನ ಇಟ್ಟಿತ್ತು.
ಕೇರಳ ಪೊಲೀಸರ ತಂಡ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಚಿನ್ನವನ್ನು ವಶಕ್ಕೆ ಪಡೆದಿದೆ. ದರೋಡೆ ಮಾಡಿ ಚಿನ್ನವನ್ನು ಅಡವಿಟ್ಟ ಮೂವರ ಪೈಕಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ, ಇಬ್ಬರು ಪರಾರಿಯಾಗಿದ್ದಾರೆ.
ಕೇರಳ ಮೂಲದವರು ದರೋಡೆ ಮಾಡಿದ ಆರೋಪಿಗಳಾದ ರಾಜೀವ್, ಉನ್ಮೇಶ್ ಮತ್ತು ಜೋಬಿ ಎಂಬುವವರು ಕೇರಳ ಮೂಲದವರು, ಕಾಣಿಯೂರಿನಲ್ಲಿ ವಾಸ್ತವ್ಯ ಹೂಡಿ ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಮಾಡುತ್ತಿದ್ದರು.
ಫೆಬ್ರವರಿ 11ರಂದು ಕಡಬದಲ್ಲಿ ಅನಾನಸ್ ಹಣ್ಣು ಮಾರಾಟದ ಬಗ್ಗೆ ಮಾತುಕತೆ ನಡೆಸಲು ಕೇರಳದಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು. ಸುಳ್ಯ ರಸ್ತೆ ಮೂಲಕ ಕಡಬಕ್ಕೆ ಆಗಮಿಸಿದ್ದ ಮೂವರು ರಾತ್ರಿ ವಾಪಸ್ ಆಗುವಾಗ ಕಾರು ಚಾಲಕ ಸಿರಾಜ್‌ಗೆ ಚಾಕು ತೋರಿಸಿ 3 ಸಾವಿರ ರೂ. ನಗದು, ಚಿನ್ನದ ಉಂಗುರ ದರೋಡೆ ಮಾಡಿದ್ದರು.
ಕಣ್ಣೂರು ಜಿಲ್ಲೆಯ ಅಲಕ್ಕೋಡು ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಸಿರಾಜ್ ಈ ಕುರಿತು ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ರಾಜೀವ್ ಬಂಧಿಸಲಾಗಿತ್ತು. ಆತ ಉನ್ಮೇಶ್ ಹೆಸರಿನಲ್ಲಿ ಚಿನ್ನವನ್ನು ಅಡವಿಟ್ಟಿದ್ದಾಗಿ ಮಾಹಿತಿ ನೀಡಿದ್ದ.
ರಾಜೀವ್‌ನನ್ನು ಬ್ಯಾಂಕಿಗೆ ಕರೆದುಕೊಂಡು ಬಂದ ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಸಹ ಬ್ಯಾಂಕಿನ ಸಮೀಪ ಎಸೆದಿದ್ದು, ಅದನ್ನು ಸಹ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.