ನವದೆಹಲಿ: ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನ ವೇಗ ಪಡೆದುಕೊಳ್ಳುತ್ತಿದ್ದು, ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವಂತೆ ಲಸಿಕೆ ತಯಾರಕ ಭಾರತ್ ಬಯೋಟೆಕ್ ಗೆ ಸೂಚಿಸಿದೆ.
ಕೋವ್ಯಾಕ್ಸಿನ್ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಭಾರತ ಬಯೋಟೆಕ್ ಗೆ ಸೂಚಿಸಿದೆ ಎನ್ನಲಾಗಿದೆ.
ಲಸಿಕೆಗಳ ಪೂರೈಕೆ ಸಮಸ್ಯೆಯನ್ನು ಎದುರಿಸುತ್ತಿರುವ ಕೇಂದ್ರ, ಕೋವಿಡ್ -19 ಗಾಗಿ ತಯಾರಿಸಿದ 'ದೇಶೀಯ ಲಸಿಕೆಗಳ ಸಾಮರ್ಥ್ಯ ವೃದ್ಧಿಗೆ' ಅನುಕೂಲವಾಗುವಂತೆ ಒಂದು ಸಮಿತಿಯನ್ನು ರಚಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ ನೀಡಲಾದ 5,33,24,811 ಡೋಸ್‌ಗಳಲ್ಲಿ, ದೇಶದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆಯಾದ ಕೊವಾಕ್ಸಿನ್ 50 ಲಕ್ಷಕ್ಕಿಂತ ಹೆಚ್ಚು ಅಥವಾ ಶೇ.10 ಲಸಿಕೆ ಪ್ರಮಾಣವನ್ನು ಒಳಗೊಂಡಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡು ಲಸಿಕೆಗಳು ಸುಮಾರು 8.7 ಕೋಟಿ ಡೋಸ್ ಲಸಿಕೆ ಹೊಂದಿದ್ದು, ಹೆಚ್ಚಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಅನ್ನು ಇಲ್ಲಿಯವರೆಗೆ ರಾಜ್ಯಗಳಿಗೆ ಕಳುಹಿಸಲಾಗಿದೆ. ಆದರೆ ಉದ್ದೇಶಿತ ಫಲಾನುಭವಿಗಳ ಸಂಖ್ಯೆ ಈಗ 34 ಕೋಟಿಗೆ ತಲುಪಿರುವುದರಿಂದ, ಮುಂದಿನ ಕೆಲವು ತಿಂಗಳುಗಳಲ್ಲಿ ಆದ್ಯತೆಯ ಜನಸಂಖ್ಯೆಗಾಗಿ ದೇಶಕ್ಕೆ 64 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.