HEALTH TIPS

ಇಂದು-ನಾಳೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ: ಸೇವೆಗಳಲ್ಲಿ ವ್ಯತ್ಯಯದ ಸಾಧ್ಯತೆ

              ನವದೆಹಲಿ:  ಎರಡು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ (ಯುಎಫ್‌ಬಿಯು)ಯು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಇಂದು-ನಾಳೆ(ಮಾ.15 ಮತ್ತು 16ರಂದು) ದೇಶಾದ್ಯಂತ ಬ್ಯಾಂಕ್‌ಗಳ ಕಾರ್ಯಾಚರಣೆಗಳಿಗೆ ವ್ಯತ್ಯಯವುಂಟಾಗಬಹುದು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ತನ್ನ ಮುಂಗಡಪತ್ರ ಭಾಷಣದಲ್ಲಿ ಸರಕಾರದ ಹೂಡಿಕೆ ಹಿಂದೆಗೆತ ಯೋಜನೆಯ ಭಾಗವಾಗಿ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣವನ್ನು ಪ್ರಕಟಿಸಿದ್ದರು.


         ಮುಷ್ಕರದ ಪರಿಣಾಮವಾಗಿ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ಜಮೆ ಮಾಡುವ ಮತ್ತು ಹಿಂದೆಗೆದುಕೊಳ್ಳುವ,ಹೊಸ ಖಾತೆಗಳನ್ನು ಆರಂಭಿಸುವ,ಚೆಕ್ ಕ್ಲಿಯರೆನ್ಸ್ ಮತ್ತು ಸಾಲ ಮಂಜೂರಿಯಂತಹ ಸೇವೆಗಳಿಗೆ ವ್ಯತ್ಯಯವುಂಟಾಗಬಹುದು. ಆದರೆ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಬಹುದು.

         ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಯುಎಫ್‌ಬಿಯು ಹೇಳಿಕೆಯಲ್ಲಿ ತಿಳಿಸಿದೆ.

         ಮುಷ್ಕರವು ನಡೆದರೆ ಶಾಖೆಗಳಲ್ಲಿ ಎಂದಿನ ಕಾರ್ಯಾಚರಣೆಗಳಿಗೆ ವ್ಯತ್ಯಯವುಂಟಾಗಬಹುದು ಎಂದು ಎಸ್‌ಬಿಐ ಸೇರಿದಂತೆ ಹೆಚ್ಚಿನ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಿಳಿಸಿವೆ. ಆದರೆ ತನ್ನೆಲ್ಲ ಶಾಖೆಗಳು ಮತ್ತು ಕಚೇರಿಗಳಲ್ಲಿ ಎಂದಿನಂತೆ ಸೇವೆಗಳನ್ನು ಲಭ್ಯವಾಗಿಸಲು ತಾನು ವ್ಯವಸ್ಥೆಗಳನ್ನು ಮಾಡಿರುವುದಾಗಿ ಎಸ್‌ಬಿಐ ಹೇಳಿದೆ. ಶಾಖೆಗಳು ಮತ್ತು ಕಚೇರಿಗಳಲ್ಲಿ ಸುಗಮ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿಯೂ ಬ್ಯಾಂಕುಗಳು ತಿಳಿಸಿವೆ.

ಸರಕಾರವು ಈಗಾಗಲೇ 2019ರಲ್ಲಿ ತನ್ನ ಹೆಚ್ಚಿನ ಪಾಲು ಬಂಡವಾಳವನ್ನು ಎಲ್ಲೈಸಿಗೆ ಮಾರಾಟ ಮಾಡುವ ಮೂಲಕ ಐಡಿಬಿಐ ಬ್ಯಾಂಕ್‌ನ್ನು ಖಾಸಗೀಕರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ 14 ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ಮಾ.4,9 ಮತ್ತು 10ರಂದು ಹೆಚ್ಚುವರಿ ಮುಖ್ಯ ಕಾರ್ಮಿಕ ಆಯುಕ್ತರೆದುರು ನಡೆದ ಸಂಧಾನ ಮಾತುಕತೆಗಳು ವಿಫಲಗೊಂಡಿರುವುದರಿಂದ ಎರಡು ದಿನಗಳ ಮುಷ್ಕರವು ನಿಗದಿಯಂತೆ ನಡೆಯಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

        ಮೂರನೇ ಒಂದರಷ್ಟು ಬ್ಯಾಂಕ್ ಸೇವೆಗಳನ್ನು ನಿರ್ವಹಿಸುತ್ತಿರುವ ಎಚ್‌ಡಿಎಫ್‌ಸಿ,ಐಸಿಐಸಿಐ,ಎಕ್ಸಿಸ್,ಇಂಡಸ್‌ಇಂಡ್ ಮತ್ತು ಕೋಟಕ್ ಮಹೀಂದ್ರದಂತಹ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯಾಚರಿಸುವ ನಿರೀಕ್ಷೆಯಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries