ಜೈಪುರ: ರೇಷನ್ ಕಾರ್ಡ್ನ್ನು ಕುಟುಂಬಸ್ಥರ ಹೆಸರಿನಲ್ಲಿ ಮಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಒಂದು ಊರಿನಲ್ಲಿ ಊರಿನ ದೇವರಾದ ಹನುಮ ದೇವ ಮತ್ತು ಮುರಳಿ ಮನೋಹರನ ಹೆಸರಲ್ಲೂ ರೇಷನ್ ಕಾರ್ಡ್ ಮಾಡಿಸಲಾಗಿದೆ. ಅದಷ್ಟೇ ಅಲ್ಲದೆ ಪ್ರತಿ ತಿಂಗಳು ಆ ಕಾರ್ಡ್ಗಳಿಗೆ ಬರುವ ಸೀಮೆಎಣ್ಣೆಯನ್ನೂ ತೆಗೆದುಕೊಳ್ಳಲಾಗುತ್ತಿದೆಯಂತೆ.
ಇಂತದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯ ರುಡಾವಲ್ ಪಂಚಾಯಿತಿಯಲ್ಲಿ ನಡೆಯುತ್ತಿದೆ. ಹನುಮ ದೇವರ ಹೆಸರಿನಲ್ಲಿ ಎಪಿಎಲ್ ಕಾರ್ಡ್ ಮಾಡಿಸಲಾಗಿದೆ. ಹನುಮನ ವಯಸ್ಸನ್ನು 81 ವರ್ಷ ಎಂದು ಬರೆಸಲಾಗಿದ್ದು, ತಂದೆಯ ಹೆಸರನ್ನು ಕೇಸರಿ ಎಂದು ಬರೆಸಲಾಗಿದೆ. ಅದರ ಜತೆ ಒಂದಿಷ್ಟು ಹೆಸರನ್ನು ಕುಟುಂಬಸ್ಥರು ಎಂದು ನಮೂದಿಸಲಾಗಿದೆ.
ಮುರುಳಿ ಮನೋಹರ್ ಜೀ ಹೆಸರಿನ ಎಪಿಲ್ ಕಾರ್ಡ್ನಲ್ಲಿ 121 ವರ್ಷ ವಯಸ್ಸನ್ನು ನಮೂದಿಸಲಾಗಿದೆ. ಈ ಎರಡೂ ಕಾರ್ಡ್ಗಳಲ್ಲಿ ಹನುಮ ದೇವರು ಮತ್ತು ಮುರುಳಿ ಮನೋಹರ ದೇವರ ಫೋಟೋವನ್ನೂ ಲಗತ್ತಿಸಲಾಗಿದೆ.
ಈ ನಕಲಿ ಕಾರ್ಡ್ಗಳ ಸುದ್ದಿ ಹರಿದಾಡುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ರುಡಾವಲ್ನ ಈ ಕಾರ್ಡ್ಗಳ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.