ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಶುಕ್ರವಾರ ಮರಾಠ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸುವ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ, ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಈ ರೀತಿಯಲ್ಲಿ ಹೇಳಿದ್ದು, ಬದಲಾದ ಸಂದರ್ಭಗಳಲ್ಲಿ ಮಂಡಲ್ ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿತು. ಐತಿಹಾಸಿಕ ಮಂಡಲ್ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲಾಗಿತ್ತು.
1931 ರ ಜನಗಣತಿಯ ಮೇಲೆ ಮಂಡಲ್ ತೀರ್ಪನ್ನು ರೂಪಿಸಲಾಗಿತ್ತು.ಬದಲಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೋಟಾಗಳನ್ನು ಸರಿಪಡಿಸಲು ನ್ಯಾಯಾಲಯಗಳು ರಾಜ್ಯಗಳಿಗೆ ಬಿಡಬೇಕು ಎಂದು ಅವರು ಹೇಳಿದರು.
ಮರಾಠರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಕಾನೂನಿನ ಪರವಾಗಿ ವಾದಿಸಿದ ರೋಹ್ಟಗಿ, ಇಂದ್ರ ಸಾಹ್ನಿ ಪ್ರಕರಣ ಎಂದೂ ಕರೆಯಲ್ಪಡುವ ಮಂಡಲ್ ತೀರ್ಪಿನ ವಿವಿಧ ಅಂಶಗಳನ್ನು ಉಲ್ಲೇಖಿಸಿದರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಶೇ .10 ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವು ಶೇ.50ರ ಮಿತಿಯನ್ನು ಉಲ್ಲಂಘಿಸಿದೆ ಎಂದು ತಿಳಿಸಿದರು.
ನೀವು ಸೂಚಿಸಿದಂತೆ, ಶೇಕಡಾ 50 ಅಥವಾ ಮಿತಿಯಿಲ್ಲದಿದ್ದರೆ, ಆಗ ಸಮಾನತೆಯ ಪರಿಕಲ್ಪನೆ ಏನು. ನಾವು ಅಂತಿಮವಾಗಿ ಅದನ್ನು ಎದುರಿಸಬೇಕಾಗುತ್ತದೆ. ಅದರಿಂದಾಗುವ ಅಸಮಾನತೆ ಬಗ್ಗೆ ಏನು, ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನೂ ಒಳಗೊಂಡ ನ್ಯಾಯಪೀಠ ಕೇಳಿತು.
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ ಮತ್ತು ರಾಜ್ಯಗಳು ಅನೇಕ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸಿವೆ ಆದರೆ, ಯಾವುದೇ ಅಭಿವೃದ್ಧಿಯಾಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.
ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿ ನೀಡುವುದನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು.ಈ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.