ಕೋಝಿಕ್ಕೋಡ್: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಡಪಕ್ಷದ ಘಟಕ ಪಕ್ಷವಾದ ಕೇರಳ ಕಾಂಗ್ರೆಸ್ ಗೆ ಸ್ಥಾನ ಮಂಜೂರು ಮಾಡಿದ್ದನ್ನು ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ಮತ್ತೊಮ್ಮೆ ಕುಟ್ಯಾಡಿಯಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸಿದರು. ಮಹಿಳೆಯರು ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಘೋಷಣೆಗಳೊಂದಿಗೆ ಬೀದಿಗಿಳಿದರು. ಪಕ್ಷದ ನಾಯಕರನ್ನು ಸರಿಪಡಿಸುತ್ತೇವೆ, ಮತ್ತು ಜನರು ಪಕ್ಷವನ್ನು ಸರಿಪಡಿಸುತ್ತಾರೆ ಎಂದು ಬ್ಯಾನರ್ ಅಡಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಟ್ಯಾಡಿಯ ಘನತೆಯನ್ನು ಕಾಪಾಡಲು ಸಿಪಿಎಂ ಮುಂದೆ ಬರಬೇಕೆಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಕುಟ್ಟಾಡಿಯಲ್ಲಿ ಕೇರಳ ಕಾಂಗ್ರೆಸ್ ಗೆ ಸ್ಥಾನ ನೀಡಿದ್ದಾಗಿ ಸಿಪಿಎಂ ಬುಧವಾರ ಬೆಳಿಗ್ಗೆ ಪ್ರಕಟನೆ ಹೊರಡಿಸಿತ್ತು. ಪಕ್ಷದ ನಿರ್ಧಾರವು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆಯದೆ ಮಾಡಿರುವ ವಂಚನೆಯಾಗಿ ಪಕ್ಷದ ಕಾರ್ಯಕರ್ರ್ತರ ತೀವ್ರ ಪ್ರತಿರೋಧಕ್ಕೆ ಕಾರಣವಾಯಿತು.
ಸಿಪಿಎಂ ಕಾರ್ಯಕರ್ತರು ಮಂಗಳವಾರ ಕುಟ್ಯಾಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಸಿಪಿಎಂ ಹಲವಾರು ವರ್ಷಗಳಿಂದ ಕುಟ್ಟಾಡಿಯಲ್ಲಿ ನಿಚ್ಚಳ ಬಹುಮತದಿಂದ ಗೆಲುವು ಸಾಧಿಸುವ ಕ್ಷೇತ್ರವಾಗಿದೆ. ಆದರೆ ಈ ಬಾರಿ ಸ್ಥಾನವನ್ನು ಸಿಪಿಎಂ ಕೇರಳ ಕಾಂಗ್ರೆಸ್ ಗೆ ಹಸ್ತಾಂತರಿಸಿರುವುದು ಪಕ್ಷದ ನೂರಾರು ಕಾರ್ಯಕರ್ತರ ಅವಕೃಪೆಗೆ ಕಾರಣವಾಯಿತು.
ಮೊದಲ ಹಂತದಲ್ಲಿ ಜೋಸ್ ಕೆ.ಮಾಣಿ ಬಣಕ್ಕೆ ತಿರುವಂಬಾಡಿ ಸ್ಥಾನವನ್ನು ನೀಡಲು ಪಕ್ಷ ನಿರ್ಧರಿಸಿತ್ತು. ಬಳಿಕ ತಿರುವಂಬಾಡಿಯ ಬದಲಿಗೆ ಸಿಪಿಎಂ ದೀರ್ಘಕಾಲದವರೆಗೆ ಗೆದ್ದಿದ್ದ ಕುಟ್ಯಾಡಿಯನ್ನು ಬಿಟ್ಟುಕೊಡಲು ನಿರ್ಧರಿಸಿತು. ಭಾರೀ ಪ್ರತಿಭಟನೆಯ ನಡುವೆಯೂ ಸಿಪಿಎಂ ನೇತೃತ್ವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಇದರೊಂದಿಗೆ ಪ್ರತಿಭಟನೆಯನ್ನು ತೀವ್ರಗೊಳಿಸಲು ಕಾರ್ಯಕರ್ತರು ನಿರ್ಧರಿಸಿರುವರು.
ಮಂಜೇಶ್ವರದಲ್ಲೂ ಇದೇ ರೀತಿಯ ಪ್ರತಿಭಟನೆ ಕಾರ್ಯಕರ್ತರಿಂದ ವ್ಯಕ್ತವಾಗಿದೆ. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಅವರಿಗೆ ಸ್ಥಾನ ನೀಡಿರುವುದರ ಬೆನ್ನಿಗೆ ಮಂಗಳವಾರ ಉಪ್ಪಳದಲ್ಲಿ ಜಯಾನಂದರಿಗೆ ಸ್ಥಾನ ನೀಡಿದ್ದರ ವಿರುದ್ದ ಪೋಸ್ಟರ್ ಗಳು ಪ್ರತ್ಯಕ್ಷಗೊಂಡಿದ್ದವು. ಜಯಾನಂದರಿಗೆ ಸ್ಥಾನ ನೀಡಬೇಡಿ, ನಿರ್ಧಾರ ಬದಲಿಸಿ ಎಂದು ಪೋಸ್ಟರ್ ನಲ್ಲಿ ಸೂಚಿಸಲಾಗಿದ್ದು, ಬುಧವಾರ ಜಿಲ್ಲಾ ಸಿಪಿಎಂ ನ ಸುಧೀರ್ಘ ಸಭೆ ನಡೆದಿದ್ದು, ಸಂಜೆ 7 ರ ವರೆಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ.