ನವದೆಹಲಿ: ಹಿರಿಯ ನಾಗರಿಕರಿಗೆ ಉಚಿತವಾಗಿ ಅಯೋಧ್ಯೆ ತೀರ್ಥಯಾತ್ರೆಯ ಸೌಲಭ್ಯವನ್ನು ಒದಗಿಸಲು ದೆಹಲಿ ಸರ್ಕಾರ ಮುಂದಾಗಿದೆ.
ಈ ಕುರಿತು ಇಂದು ವಿಧಾನಸಭೆಯಲ್ಲಿ ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಮ್ಮ ಸರ್ಕಾರ ಹಿರಿಯ ನಾಗರಿಕರನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಹಾಗೂ ರಾಮ ರಾಜ್ಯ ನಮ್ಮ ಕನಸಾಗಿದೆ. ಈ ದಿಸೆಯಲ್ಲಿ ದೆಹಲಿಯ ಹಿರಿಯ ನಾಗರಿಕರು ಅಯೋಧ್ಯೆ ತೀರ್ಥಯಾತ್ರೆಯನ್ನು ಕೈಗೊಳ್ಳಲು ನೆರವು ನೀಡುವ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ನನಗೆ ಭಗವಾನ್ ರಾಮ, ಆಂಜನೇಯನಲ್ಲಿ ನಂಬಿಕೆ ಇದೆ. ರಾಮರಾಜ್ಯದಲ್ಲೂ ನಂಬಿಕೆ ಇದೆ. ಅದನ್ನೂ ಸಾಧಿಸುವುದೇ ನಮ್ಮ ಗುರಿಯಾಗಿದೆ. ರಾಮರಾಜ್ಯ ಸಾಧಿಸಬೇಕಾದರೆ ಹತ್ತು ಗುರಿಗಳನ್ನು ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ಯಾರೂ ಹಸಿವಿನಿಂದ ಬಳಲಬಾರದು, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ, ಎಲ್ಲರಿಗೂ ಜಾಗತಿಕ ಮಟ್ಟದ ವೈದ್ಯಕೀಯ ಸೇವೆ, ಸ್ವಚ್ಚ ನೀರು, ಕರೆಂಟ್, ಮನೆ, ಹಿರಿಯರಿಗೆ ಗೌರವ, ಮಹಿಳಾ ಸುರಕ್ಷತೆ, ಸಮಾನತೆ, ಅಪರಾಧ ಮುಕ್ತ ಸಮಾಜ ಇವೇ ಆ ಹತ್ತು ರಾಮರಾಜ್ಯದ ತತ್ವಗಳು. ಇವುಗಳನ್ನು ಸಾಧಿಸುವುದೇ ನಮ್ಮ ಗುರಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.