ತ್ರಿಶೂರ್: 2017ರಲ್ಲಿ ಲೈಂಗಿಕ ಕಿರುಕುಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಲಯಾರ್ ಬಾಲಕಿಯರ ತಾಯಿ, ತನ್ನ ಪುತ್ರಿಯರಿಗೆ ನ್ಯಾಯ ದೊರೆಯದಿದ್ದಕ್ಕೆ ಪ್ರತಿಭಟನೆಯಾಗಿ ಧರ್ಮದಾಮ್ ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಂಗಳವಾರ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯಾದ್ಯಂತ ಮೆರವಣಿಗೆ ಪೂರ್ಣಗೊಂಡ ಬಳಿಕ ತ್ರಿಶೂರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ನಿರಾಕರಣೆ ಮತ್ತು ನಿಂಧನೆಗೊಳಗಾಗಿರುವ ಎಲ್ಲಾ ಮಕ್ಕಳ ಪೋಷಕರ ಪರವಾಗಿ ಮುಖ್ಯಮಂತ್ರಿ ವಿರುದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಅಕ್ಟೋಬರ್ 2017ರಲ್ಲಿ 13 ಹಾಗೂ 9 ವರ್ಷದ ಇಬ್ಬರು ದಲಿತ ಬಾಲಕಿಯರು, ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೂ ಮುನ್ನಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಮರಣೋತ್ತರ ಪರೀಕ್ಷೆ ವೇಳೆಯಲ್ಲಿ ತಿಳಿದುಬಂದಿತ್ತು. ಈ ಘಟನೆ ನಡೆದು ಸುಮಾರು ನಾಲ್ಕು ವರ್ಷವಾದರೂ ಈವರೆಗೂ ತನ್ನಗೆ ನ್ಯಾಯ ಸಿಕ್ಕಿಲ್ಲ ಎಂದು ಆ ಮಹಿಳೆ ಹೇಳಿದ್ದಾರೆ.
ಪಿಣರಾಯಿ ವಿಜಯನ್ ವಿರುದ್ಧದ ಸ್ಪರ್ಧೆಗೆ ಸಂಘ ಪರಿವಾರ ಹೊರತುಪಡಿಸಿ, ಇತರ ಯಾವುದೇ ಪಕ್ಷಗಳು ಬೆಂಬಲ ನೀಡಿದರೆ ಸ್ವೀಕರಿಸುತ್ತೇನೆ. ವಲಯಾರ್ ಸಮರ ಸಮಿತಿ ಪ್ರತಿನಿಧಿಯಾಗಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ನ್ಯಾಯದ ಬಗ್ಗೆ ಮುಖ್ಯಮಂತ್ರಿಯನ್ನು ಕೇಳಲು ಬಯಸುತ್ತೇನೆ. ಅದಕ್ಕಾಗಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನ್ಯಾಯ ಸಿಗುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ನ್ಯಾಯ ಸಿಕ್ಕಿಲ್ಲ. ಬದಲಿಗೆ ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗೆ ಬಡ್ತಿ ನೀಡಲಾಗಿದೆ. ನ್ಯಾಯ ಕೇಳಲು ಇದು ಸೂಕ್ತ ಸಮಯವಾಗಿದೆ ಎಂದು ಆ ಮಹಿಳೆ ಹೇಳಿದ್ದಾರೆ.