ತಿರುವನಂತಪುರ: ಕೇಂದ್ರ ಸಂಸ್ಥೆಗಳ ವಿರುದ್ಧದ ನ್ಯಾಯಾಂಗ ವಿಚಾರಣೆ ನ್ಯಾಯಸಮ್ಮತವೇ ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸರಿಯಾದ ಕಾನೂನು ಸಲಹೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಿಸಿದರು.
ಇದೇ ಸಂದರ್ಭ ಸರ್ಕಾರವು ಆದೇಶ ಹೊರಡಿಸಲು ಬಯಸಿದರೆ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದಕ್ಕೆ ಚುನಾವಣಾ ಆಯೋಗದ ಅನುಮೋದನೆ ಅಗತ್ಯವಿದೆ. ಆಯೋಗವು ಅನುಮತಿ ನೀಡದಿರಬಹುದು ಎಂಬುದು ಇತ್ತೀಚೆಗಿನ ಮಾಹಿತಿಯಾಗಿದೆ.
ನೀತಿ ಸಂಹಿತೆ ಚಾಲ್ತಿಯಲ್ಲಿರುವಾಗ ಚುನಾವಣಾ ಆಯೋಗವು ಸರ್ಕಾರದ ಹೊಸತಾದ ಯಾವ ನಡೆಗೂ ಅನುಮತಿ ನೀಡುವುದಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ಕೂಡ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯಬಹುದು. ಕೇಂದ್ರ ಏಜೆನ್ಸಿಯನ್ನು ತನಿಖೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಬಗ್ಗೆಯೂ ಆಯೋಗ ಪರಿಶೀಲಿಸುತ್ತಿದೆ. ಆ ಬಳಿಕವಷ್ಟೇ ಸರ್ಕಾರದ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.