ನವದೆಹಲಿ: ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಿಗೆ ನಮ್ಮ ರೈತರ ತಂಡವನ್ನು ಕಳುಹಿಸಿದ ಬಿಜೆಪಿಗೆ ಮತದಾನ ಮಾಡದಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಬಲ್ಬೀರ್ ಸಿಂಗ್ ರಾಜೇವಾಲಾ ಹೇಳಿದ್ದಾರೆ.
ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಅದರ ಬದಲಿಗೆ ರೈತರ ಕುರಿತು ನಿಷ್ಕಾಳಜಿ ತೋರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸದಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಕಳೆದ 98 ದಿನಗಳಿಂದ ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ರೈತರ ಬಗ್ಗೆ ತೋರುತ್ತಿರುವ ವರ್ತನೆಯನ್ನು ಜನರಿಗೆ ತಿಳಿಸಿಕೊಡುವ ಕಾರ್ಯವನ್ನು ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ:
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.
ದೆಹಲಿ ಮೂರು ಗಡಿಯಲ್ಲಿ ಪ್ರತಿಭಟನೆ:
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 98 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.