ಪೆರ್ಲ: ರಾಷ್ಟ್ರೀಯ ಭದ್ರತೆ ಎಂಬುದು ರಾಷ್ಟ್ರದ ಆರ್ಥಿಕ ಬಲ, ಸೇನಾ ಬಲ ಮತ್ತು ರಾಜಕೀಯ ಬಲದ ಮೇಲೆ ಅವಲಂಬಿತವಾಗಿದೆ. ಇವುಗಳೆಲ್ಲವೂ ಸಮಾನವಾಗಿ ಅವಶ್ಯಕವಾಗಿದ್ದರೂ ತನ್ನ ನಾಡು, ಕುಟುಂಬ, ಬಂಧುಮಿತ್ರರೆಲ್ಲರನ್ನು ತ್ಯಜಿಸಿ ಹಗಳಿರುನ್ನದೇ ರಾಷ್ಟ್ರದ ರಕ್ಷಣೆಗೆ ಪಣತೊಟ್ಟು ನಿಂತಿರುವ ಸೈನಿಕನ ತ್ಯಾಗವೇ ಸೇನಾ ಬಲದ ಪ್ರಮುಖ ಶಕ್ತಿ ಎಂದರೆ ತಪ್ಪಾಗಲಾರದು. ನಾವಿಂದು ನಿಶ್ಚಿಂತೆಯಿಂದ ನಿದ್ರಿಸಲು ಕಾರಣ ಸೈನಿಕನ ತ್ಯಾಗ, ರಾಷ್ಟ್ರ ಭಕ್ತಿ, ಬಲಿದಾನ ಎಂಬುದನ್ನು ನಾವೆಂದು ಮರೆಯಬಾರದು ಎಂದು ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಶಿಲ್ಪಾ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ದಿನಾಚರಣೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಯಾವುದೇ ತ್ಯಾಗ, ದೇಶ ಪ್ರೇಮವೂ ಇಲ್ಲದೇ ತಮ್ಮ ತಮ್ಮ ಜೇಬು ತುಂಬಿಸಲು ಪರಿಶ್ರಮಿಸುವ ರಾಜಕಾರಣಿಗಳನ್ನು, ಸಿನೆಮಾ ನಟರನ್ನು, ಶ್ರೀಮಂತರನ್ನು ಹಾರ ಹಾಕಿ, ಪಟಾಕಿ ಸಿಡಿಸಿ, ಮೆರವಣಿಗೆಯಲ್ಲಿ ಕರೆತಂದು ಕಾರ್ಯಕ್ರಮಗಳಿಗೆ ಸ್ವಾಗತಿಸುವ ನಮ್ಮ ಮನೋಭಾವ ಬದಲಾಗಬೇಕಿದೆ. ತನ್ನ ಸರ್ವಸ್ವವನ್ನೂ ಹಗಳಿರುನ್ನದೇ ರಾಷ್ಟ್ರ ಕಾಯಕದಲ್ಲಿ ತೊಡಗುವ, ರಾಷ್ಟ್ರ ಸೇವೆಗಾಗಿ ತಮ್ಮ ಜೀವವನ್ನೇ ಸಮರ್ಪಿಸಲು ಸಿದ್ಧವಿರುವ ವೀರ ಸೈನಿಕನನ್ನು ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಕರೆ ತರಬೇಕಿದೆ, ಸ್ವಾಗತಿಸಬೇಕಿದೆ, ಗೌರವಿಸಬೇಕಿದೆ. ಮಾತ್ರವಲ್ಲ ಸಿನಿಮಾ ನಟರನ್ನು, ರಾಜಕೀಯ ನಾಯಕರನ್ನು ಮಾದರಿ ವ್ಯಕ್ತಿಗಳಾಗಿ ಸ್ವೀಕರಿಸುವ ಬದಲು ಸೈನಿಕನನ್ನು ಮಾದರಿಯಾಗಿ ಸ್ವೀಕರಿಸಬೇಕಿದೆ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಅಂಕಿತಾ, ಅನುಶ್ರೀ, ದೀಕ್ಷಿತ್, ಹರ್ಷ, ಮಂಜುನಾಥ ಉಪಸ್ಥಿತರಿದ್ದರು. ಮನೋಹರ ಪ್ರಸಾದ ಸ್ವಾಗತಿಸಿ, ಸುಮನಾ ವಂದಿಸಿದರು. ವಿಶ್ವೇಶ್ ಕಾಮತ್ ನಿರೂಪಿಸಿದರು.