ಪಟ್ನಾ: ಆರ್‌ಜೆಡಿ ಶಾಸಕ ಸ್ಟೆತೊಸ್ಕೋಪ್ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಸಾಧನದೊಂದಿಗೆ ಸದನ ಪ್ರವೇಶಿಸಿದಾಗ ಅಲ್ಲಿದ್ದ ಎಲ್ಲರಿಗೂ ಅಚ್ಚರಿ, ಕುತೂಹಲ.
'ನಾನು ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ರಕ್ತದೊತ್ತಡ ಪರೀಕ್ಷಿಸಲು ಬಯಸುತ್ತೇನೆ. ಅವರು ಅನುಮತಿ ಕೊಟ್ಟರೆ ನನ್ನ ಕಾರ್ಯ ಮಾಡುವೆ' ಎಂದಾಗ ಸದನದ ಕುತೂಹಲ ಇನ್ನೂ ಹೆಚ್ಚಿತು.
ರಕ್ತದೊತ್ತಡ ಸಾಧನದೊಂದಿಗೆ ಸದನಕ್ಕೆ ಬಂದವರು ಮಹುವಾ ಕ್ಷೇತ್ರದ ಶಾಸಕ ಡಾ.ಮುಕೇಶ್ ರೌಶನ್. ಅವರು ವೃತ್ತಿಯಿಂದಲೂ ವೈದ್ಯ.
'ಇತ್ತೀಚಿನ ದಿನಗಳಲ್ಲಿ ನಿತೀಶ್‌ಕುಮಾರ್ ಬೇಗ ಸಿಟ್ಟಿಗೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಮಾತ್ರವಲ್ಲ, ನಮ್ಮ ರಕ್ಷಕರೂ ಆಗಿದ್ದಾರೆ. ಅವರು ಸಣ್ಣಸಣ್ಣ ವಿಷಯಗಳಿಗಾಗಿ ಕೋಪಗೊಳ್ಳಬಾರದು. ಈ ಕಾರಣಕ್ಕಾಗಿಯೇ ನಾನು ಅವರ ರಕ್ತದೊತ್ತಡ ಪರೀಕ್ಷಿಸಲು ನಿರ್ಧರಿಸಿದ್ದು, ಅನುಮತಿ ನೀಡಿದರೆ ಪರೀಕ್ಷಿಸುವೆ' ಎಂದು ಡಾ.ಮುಕೇಶ್ ಹೇಳಿದರು.
ಅಧಿವೇಶನದಲ್ಲಿ ಸೋಮವಾರ ಮಾತನಾಡುತ್ತಿದ್ದ ನಿತೀಶ್‌ಕುಮಾರ್, ಆರ್‌ಜೆಡಿಯ ವಿಧಾನ ಪರಿಷತ್ ಸದಸ್ಯ ಸುಬೋಧ್ ರಾಯ್ ಅವರ ಮೇಲೆ ಕೋಪಗೊಂಡಿದ್ದರು. 'ನಾನು ಮಾತನಾಡುತ್ತಿರುವಾಗ ಮಧ್ಯ ಬಾಯಿ ಹಾಕಬೇಡ. ಕುಳಿತುಕೋ. ಇದು ನಡೆದುಕೊಳ್ಳುವ ರೀತಿಯೇ' ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದರು.
ಇದೇ ಕಾರಣಕ್ಕಾಗಿ ಡಾ.ಮುಕೇಶ್ ಅವರು ರಕ್ತದೊತ್ತಡ ಪರೀಕ್ಷಿಸುವ ಸಾಧನ, ಸ್ಟೆತೊಸ್ಕೋಪ್‌ಅನ್ನು ಸದನಕ್ಕೆ ತರುವ ಮೂಲಕ ನಿತೀಶ್‌ಕುಮಾರ್‌ಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದರು.