ಕಾಸರಗೋಡು: ರಾಜ್ಯದ ಎಡರಂಗ ನೇತೃತ್ವದ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಹಾಕುವ ನಿಟ್ಟಿನಲ್ಲಿ 'ಇಡಿ'ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ, ಮಂಜೇಶ್ವರ ಮಂಡಲ ಅಭ್ಯರ್ಥಿ ಕೆ.ಸುರೇಂದ್ರನ್ ಟೀಕಿಸಿದ್ದಾರೆ.
ಅವರು ಸೋಮವಾರ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿನ್ನ, ಡಾಲರ್ ಕಳ್ಳಸಾಗಾಟಗಾರರಿಗೆ ಬೆಂಬಲ ನೀಡುತ್ತಿರುವ ಸರ್ಕಾರ ಆಳಸಮುದ್ರ ಒಪ್ಪಂದದಲ್ಲಿ ದೇಶದ ಹಿತ ಕಡೆಗಣಿಸಿ ವಿನಾಶಕಾರಿ ನಿಲುವು ತಳೆದಿದೆ. ಶಬರಿಮಲೆ ವಿಷಯದಲ್ಲಿ ಸರ್ಕಾರ ತನ್ನ ಹಿಂದಿನ ನಿಲುವನ್ನು ಮುಂದುವರಿಸಲು ಯತ್ನಿಸುತ್ತಿದ್ದು, ಶಬರಿಮಲೆ ಭಕ್ತಾದಿಗಳಿಗೆ ಮತ್ತೆ ಸಂಕಷ್ಟ ಎದುರಾಗುವ ಎಲ್ಲ ಸೂಚನೆ ಕಂಡುಬರುತ್ತಿದೆ. ಉದುಮದಲ್ಲಿ ಸಿಪಿಎಂ ಗೆಲುವಿಗೆ ಮುಸ್ಲಿಂಲೀಗ್ ಸಹಾಯ ಒದಗಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಮಂಜೇಶ್ವರದಲ್ಲಿ ಸಿಪಿಎಂ, ಮುಸ್ಲಿಂ ಲೀಗಿಗೆ ಸಹಾಯ ಒದಗಿಸುತ್ತಿದೆ. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಕಾನೂನುಸಮ್ಮತ ಮತದಾನ ನಡೆಯಬೇಕಾಗಿದ್ದಲ್ಲಿ ಕೇಂದ್ರ ಸಏನೆ ನಿಯೋಜನೆ ಅನಿವಾರ್ಯ ಎಂದು ತಿಳಿಸಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಸಮನ್ವಯಕಾರರಾಗಿ ಸಹಕರಿಸಿದರು. ಬಿಜೆಪಿ ಮುಖಂಡರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ಸುಧಾಮ ಗೋಸಾಡ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮೇಶ್ ಕೆ.ವಿ ವಂದಿಸಿದರು.