ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ, ನಂತರ ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಮೂಗ ಮತ್ತು ಕಿವುಡ ಯುವತಿ ಗೀತಾಳಿಗೆ ಕೊನೆಗೂ ಆಕೆಯ ತಾಯಿ ಸಿಕ್ಕಿದ್ದಾರೆ.
ಹೌದು.. ಪಾಕಿಸ್ತಾನದಿಂದ ಭಾರತಕ್ಕೆ ಬಂದು ಬರೊಬ್ಬರಿ 5 ವರ್ಷಗಳ ಬಳಿಕ ಕೊನೆಗೂ ಗೀತಾ ತನ್ನ ಅಮ್ಮನನ್ನು ಸೇರಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಗೀತಾಳ ಅಮ್ಮ ಪತ್ತೆಯಾಗಿದ್ದು, ಗೀತಾಳನ್ನು ರಕ್ಷಿಸಿ, ಆಕೆಯನ್ನು ತಮ್ಮ ರಕ್ಷಣೆಯಲ್ಲಿ ಇರಿಸಿಕೊಂಡಿದ್ದ ಪಾಕಿಸ್ತಾನದ ಈಧಿ ವೆಲ್‌ಫೇರ್ ಟ್ರಸ್ಟ್ ಮುಖ್ಯಸ್ಥೆ ಬಿಲ್ಕೀಸ್ ಈಧಿ, ಗೀತಾ ತನ್ನ ತಾಯಿಯನ್ನು ಸೇರಿಕೊಂಡಿರುವುದಾಗಿ ಖಚಿತಪಡಿಸಿದ್ದಾರೆ.
ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು, ಪಾಕ್ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿರುವ ಈಧಿ ಫೌಂಡೇಶನ್ ನ ಬಿಲ್ಕೀಸ್ ಈಧಿ, 'ಆಕೆ ನನ್ನೊಂದಿಗೆ ಸಂಪರ್ಕದಲ್ಲಿದ್ದಳು. ಈ ವಾರಾಂತ್ಯದಲ್ಲಿ ಆಕೆ ತನ್ನ ನೈಜ ತಾಯಿಯನ್ನು ಭೇಟಿ ಮಾಡಿರುವುದಾಗಿ ಕೊನೆಗೂ ಸಿಹಿ ಸುದ್ದಿ ನೀಡಿದ್ದಾಳೆ' ಎಂದು ತಿಳಿಸಿದ್ದಾರೆ.
ಗೀತಾ ನೈಜ ಹೆಸರು ರಾಧಾ ವಾಘ್ಮೋರೆ:
ಪಾಕಿಸ್ತಾನಕ್ಕೆ ತೆರಳಿದ್ದ ಬಾಲಕಿಗೆ ಈಧಿ ಫೌಂಡೇಷನ್ ಗೀತಾ ಎಂದು ಹೆಸರಿಟ್ಟಿತ್ತು. ಇದೇ ಹೆಸರಿನಿಂದಲೇ ಗೀತಾ ಖ್ಯಾತಿ ಗಳಿಸಿದ್ದಳು. ಆದರೆ ಆಕೆಯ ಪೋಷಕರು ಆಕೆಗೆ ರಾಧಾ ವಾಘ್ಮೋರೆ ಎಂದು ಹೆಸರಿಟ್ಟಿದ್ದರಂಕೆ. ವಾಘ್ಮೋರೆ ಎಂಬುದು ಕುಟುಂಬದ ಹೆಸರಾಗಿದೆ. ಈ ಬಗ್ಗೆಯೂ ಮಾಹಿತಿ ನೀಡಿರುವ ಬಿಲ್ಕೀಸ್ ಈಧಿ, 'ಆಕೆಯ ನಿಜವಾದ ಹೆಸರು ರಾಧಾ ವಾಘ್ಮೋರೆ. ಮಹಾರಾಷ್ಟ್ರದ ನೈಗಾನ್ ಗ್ರಾಮದಲ್ಲಿನ ತನ್ನ ತಾಯಿಯನ್ನು ಆಕೆ ಸೇರಿಕೊಂಡಿದ್ದಾಳೆ. ಆಕೆಯನ್ನು ಯಾರೋ ಪಾಕಿಸ್ತಾನದಲ್ಲಿ ಬೀದಿಪಾಲು ಮಾಡಿದ್ದರು. ಆಶ್ರಯವಿಲ್ಲದೆ ಪರದಾಡುತ್ತಿದ್ದ ಆಕೆಯನ್ನು ನಾವು ಕರಾಚಿಯಲ್ಲಿ ನೋಡಿ ರಕ್ಷಿಸಿದ್ದೆವು ಎಂದು ಹೇಳಿದ್ದಾರೆ.
2015ರಲ್ಲಿ ಗೀತಾ ಸುದ್ದಿಯಾಗಿದ್ದಳು. ಪಾಕಿಸ್ತಾನದಲ್ಲಿ ಸಿಕ್ಕಿದ್ದ ಬಾಲಕಿಯ ಮೂಲ ಭಾರತ ಎನ್ನುವುದು ತಿಳಿದ ಬಳಿಕ ಆಕೆಯನ್ನು ಭಾರತಕ್ಕೆ ಹಸ್ತಾಂತರಿಸುವ ಕಾರ್ಯಗಳು ನಡೆದಿದ್ದವು. ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನದ ಕರಾಚಿನ ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿ ಸಿಕ್ಕಾಗಿ 11-12 ವರ್ಷದವಳಾಗಿದ್ದ ಗೀತಾ, ಸುಮಾರು 12 ವರ್ಷದ ಬಳಿಕ ತಾಯ್ನಾಡಿಗೆ ಮರಳಿದ್ದಳು. ಆದರೆ ಭಾರತಕ್ಕೆ ಮರಳಿ ಐದು ವರ್ಷವಾದರೂ ಆಕೆಯ ನೈಜ ತಾಯಿ ಯಾರೆಂದು ಗೊತ್ತಾಗಿರಲಿಲ್ಲ. ಮಾತು ಬಾರದ ಮತ್ತು ಕಿವಿ ಕೇಳದ ಕಾರಣ ಆಕೆಯ ಪೋಷಕರ ಪತ್ತೆ ಮತ್ತಷ್ಟು ಕಷ್ಟವಾಗಿತ್ತು. ಅನೇಕ ಪ್ರಯತ್ನಗಳ ಬಳಿಕ ಕೊನೆಗೂ ಆಕೆಯ ಹೆತ್ತಮ್ಮ ಸಿಕ್ಕಿದ್ದಾರೆ. ಆಕೆಯ ನಿಜ ಹೆಸರು ಗೊತ್ತಾಗದ ಕಾರಣ ಗೀತಾ ಎಂಬ ಹೆಸರು ನೀಡಲಾಗಿತ್ತು.
ಮರು ಮದುವೆಯಾಗಿದ್ದ ತಾಯಿ:
ಗೀತಾಳ ನಿಜವಾದ ಪೋಷಕರನ್ನು ಹುಡುಕಲು ನಾಲ್ಕೂವರೆ ವರ್ಷ ಬೇಕಾಯಿತು. ಇದು ಡಿಎನ್‌ಎ ಪರೀಕ್ಷೆಯ ಬಳಿಕ ದೃಢಪಟ್ಟಿದೆ. ಗೀತಾ ಕೂಡ ತನ್ನ ತಾಯಿಯನ್ನು ಗುರುತಿಸಿದ್ದಾಳೆ. ಆಕೆಯ ತಂದೆ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆಯ ತಾಯಿ ಮೀನಾ ಮರು ಮದುವೆಯಾಗಿದ್ದರು. ಅಕೆಯ ತನ್ನ ಕುಟುಂಬವನ್ನು ಮರಳಿ ಸೇರಿಕೊಂಡಿರುವುದು ತಮಗೆ ಅಪಾರ ಖುಷಿ ನೀಡಿದೆ ಎಂದು ಬಿಲ್ಕೀಸ್ ತಿಳಿಸಿದ್ದಾರೆ.