ಕಾಸರಗೋಡು: ವಾಳಯಾರ್‍ನಲ್ಲಿ ನಡೆದ ಹೆಣ್ಮಕ್ಕಳ ಸಂಶಯಾಸ್ಪದ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಹೆಣ್ಮಕ್ಕಳ ತಾಯಿಯ ನೇತೃತ್ವದಲ್ಲಿ ಕಾಸರಗೋಡಿನಿಂದ ಮಂಗಳವಾರ ಆರಂಭಗೊಂಡಿತು.
ನ್ಯಾಯ ಯಾತ್ರೆ'ಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ವಾಳಯಾರ್ ಹೆಣ್ಮಕ್ಕಳ ತಾಯಿಯನ್ನು ನಾನಾ ರಾಜಕೀಯ ಪಕ್ಷಗಳ ಮುಖಂಡರು ಭೇಟಿಯಾಗಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಕೀಲ ಕೆ.ಶ್ರೀಕಾಂತ್ ತಾಯಿಯ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವುದರ ಜತೆಗೆ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್, ಮುಮ್ತಾಜ್ ಸಮೀರಾ, ರಾಜುಕೃಷ್ಣನ್, ಸಿ, ಆರ್ ನೀಲಕಂಠನ್, ವಿಳಯೋಡಿ ವೇಣುಗೋಪಾಲನ್ ಮುಂತಾದವರು ಉಪಸ್ಥಿತರಿದ್ದರು. ಯಾತ್ರೆ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಏ. 4ರಂದು ತಿರುವನಂತಪುರದದ ಸೆಕ್ರೆಟೇರಿಯೆಟ್ ಎದುರು ಸಮಾರೋಪಗೊಳ್ಳಲಿದೆ.
ಮಕ್ಕಳ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಾಲಕ್ಕಾಡಿನಲ್ಲಿ ಕೇಶಮುಂಡನ ನಡೆಸಿ ತಾಯಿ ಮುಷ್ಕರ ನಡೆಸಿದ್ದರು. ಕಾಸರಗೋಡಿನಿಂದ ಆರಂಭಗೊಂಡ ಯಾತ್ರೆ ಸಂದರ್ಭ ಕೆಲವರು ಕೇಶಮುಂಡನ ನಡೆಸುವ ಮೂಲಕ ಬೆಂಬಲ ಸೂಚಿಸಿದರು.