ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆಗಳ ಭಾಗವಾಗಿ ನೂತನ ಗೋಪುರ ನಿರ್ಮಾಣ ಚಟುವಟಿಕೆಗಳಿಗೆ ನಾಳೆ ಚಾಲನೆ ನೀಡಲಾಗುವುದು. ಇದರ ಪೂರ್ವಭಾವಿಯಾಗಿ ಇಂದು(ಶನಿವಾರ) ಅಖಂಡ ಭಜನ ಸಂಕೀರ್ತನೆ ಏರ್ಪಡಿಸಲಾಗಿದ್ದು, ಬೆಳಿಗ್ಗೆ 8ಕ್ಕೆ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಪ್ರಜ್ವಲನೆಗೈದು ಚಾಲನೆ ನೀಡುವರು. ಬಳಿಕ ವಿವಿಧ ಭಜನ ತಂಡಗಳಿಂದ ಭಜನೆ ನಡೆಯಲಿದ್ದು ಸಂಜೆ 6ಕ್ಕೆ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾವರ್ತಿ ನಾಮಜಪ ಪ್ರದಕ್ಷಿಣೆ ನಡೆಯಲಿದೆ. 6.30ಕ್ಕೆ ದೀಪಾರಾಧನೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ.
ಭಾನುವಾರ ಬೆಳಿಗ್ಗೆ 7ಕ್ಕೆ ಅಖಂಡ ಭಜನೆಯ ಮಹಾಮಂಗಳಾರತಿ ನೆರವೇರಲಿದೆ. 8ಕ್ಕೆ ವಿಧಿವಿಧಾನಗಳೊಂದಿಗೆ ನೂತನ ಗೋಪುರ ನಿರ್ಮಾಣಕ್ಕೆ ವೃಷಭನಿಂದ ಹಳೆಯ ಕಟ್ಟಡ ಮುರಿಯುವ ಕೆಲಸಕ್ಕೆ ಚಾಲನೆ ನೀಡಲಾಗುವುದು. 8.30 ರಿಂದ ಸಾರ್ವಜನಿಕ ಭಕ್ತವೃಂದದವರಿಂದ ಕರಸೇವೆ ನಡೆಯಲಿದೆ.