ನವದೆಹಲಿ: ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಬುಧವಾರ ಖ್ಯಾತ ಭಾರತೀಯ ಪ್ರಾಧ್ಯಾಪಕ ಮತ್ತು ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ಅವರ 89 ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಡೂಡಲ್ ರಚಿಸಿದೆ. ಡಾ. ಯು. ಆರ್. ರಾವ್ ಅವರನ್ನು ಅನೇಕರು "ಭಾರತದ ಸ್ಯಾಟಲೈಟ್ ಮ್ಯಾನ್" ಎಂದು ನೆನೆಯುತ್ತಾರೆ.
ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿದ್ದ ರಾವ್ ಅವರು 1975 ರಲ್ಲಿ ಭಾರತದ ಮೊದಲ ಉಪಗ್ರಹ - “ಆರ್ಯಭಟ” ಉಡಾವಣೆಯ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು.
1966 ರಲ್ಲಿ ಭಾರತಕ್ಕೆ ಮರಳಿದ ಪ್ರೊ. ರಾವ್ ಅವರು 1972 ರಲ್ಲಿ ತಮ್ಮ ದೇಶದ ಉಪಗ್ರಹ ಕಾರ್ಯಕ್ರಮವನ್ನು ಮುನ್ನಡೆಸುವ ಮೊದಲು ಬಾಹ್ಯಾಕಾಶ ವಿಜ್ಞಾನಕ್ಕಾಗಿ ಭಾರತದ ಪ್ರಮುಖ ಸಂಸ್ಥೆಯಾದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ನಲ್ಲಿ ವ್ಯಾಪಕವಾದ ಉನ್ನತ-ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 1984 ರಿಂದ 1994 ರವರೆಗೆ ಪ್ರೊ. ರಾವ್ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ರಾವ್ 2013 ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಅದೇ ವರ್ಷ ಪಿಎಸ್‌ಎಲ್‌ವಿ ಭಾರತದ ಮೊದಲ ಅಂತರಗ್ರಹ ಮಿಷನ್ “ಮಂಗಳಯಾನ" ಪ್ರಾರಂಭಿಸಿತು-ಇದು ಇಂದು ಮಂಗಳವನ್ನು ಪರಿಭ್ರಮಿಸುತ್ತದೆ. ರಾವ್ 2017 ರಲ್ಲಿ ನಿಧನವಾದರು.