ವಾಷಿಂಗ್ಟನ್ : ಗೂಗಲ್ ಹಾಗೂ ಅದರ ಪೋಷಕ ಸಂಸ್ಥೆ ಆಲ್ಫಾಬೆಟ್, ಗೂಗಲ್ ಬಳಕೆದಾರರ ದತ್ತಾಂಶಗಳನ್ನು ಮಾರುವೇಷದಲ್ಲಿ ಕದ್ದ ಆರೋಪದಡಿ 5 ಬಿಲಿಯನ್ ಡಾಲರ್ ದಂಡ ತೆರವು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಗೂಗಲ್ ಸಂಸ್ಥೆಯು ವ್ಯಾಪಕವಾಗಿ ದತ್ತಾಂಶಗಳ ಮೇಲೆ ನಿಗಾ ಇರಿಸುವ ವ್ಯವಹಾರ ನಡೆಸುತ್ತಿದೆ ಎಂದು ಕಳೆದ ಜೂನ್‌ನಲ್ಲಿ ದೂರು ದಾಖಲಾಗಿತ್ತು.
ಗೂಗಲ್ ಕ್ರೋಮ್‌ನಲ್ಲಿ ಮಾರುವೇಷದ ಖಾಸಗಿ ಬ್ರೌಸಿಂಗ್ ರೂಪವನ್ನು ತೆರೆದ ಬಳಿಕವೂ ಬ್ರೌಸಿಂಗ್ ಇತಿಹಾಸ ಮತ್ತು ಇತರೆ ವೆಬ್ ಚಟುವಟಿಕೆಯ ದತ್ತಾಂಶಗಳನ್ನು ಗೂಗಲ್ ಸಂಗ್ರಹಿಸುತ್ತಿದೆ ಎಂದು ಮೂವರು ಬಳಕೆದಾರರು ನೀಡಿದ್ದ ದೂರಿನಲ್ಲಿ ತಿಳಿಸಲಾಗಿತ್ತು.
ಗೂಗಲ್ ಅನಾಲಿಟಿಕ್ಸ್, ಗೂಗಲ್ ಆಡ್ ಮ್ಯಾನೇಜರ್, ವೆಬ್‌ಸೈಟ್ ಪ್ಲಗ್-ಇನ್ಸ್ ಮತ್ತು ಇತರೆ ಅಪ್ಲಿಕೇಷನ್‌ಗಳು, ಮೊಬೈಲ್ ಆಪ್‌ಗಳಲ್ಲಿನ ಬಳಕೆದಾರರನ್ನು ಟ್ರ್ಯಾಕ್ ಮಾಡಲು ವಿಭಿನ್ನ ವ್ಯವಸ್ಥೆಗಳನ್ನು ಗೂಗಲ್ ಬಳಸುತ್ತದೆ. ನಿಮ್ಮ ಸ್ನೇಹಿತರು ಯಾರು, ನಿಮ್ ಹವ್ಯಾಸಗಳೇನು, ನೀವು ಏನನ್ನು ತಿನ್ನಲು ಇಷ್ಟಪಡುತ್ತೀರ, ನೀವು ನೋಡುವ ಸಿನಿಮಾಗಳು ಯಾವುವು, ಎಲ್ಲಿ ಮತ್ತು ಯಾವಾಗ ಶಾಪಿಂಗ್ ಮಾಡಲು ಬಯಸುತ್ತೀರಿ, ನಿಮ್ಮ ನೆಚ್ಚಿನ ರಜೆಕಾಲದ ಸ್ಥಳ, ನಿಮ್ಮ ಇಷ್ಟದ ಬಣ್ಣ, ಅಷ್ಟೇ ಅಲ್ಲ ನಿಮ್ಮ ಚಟುವಟಿಕೆಗಳನ್ನು 'ಖಾಸಗಿ'ಯಾಗಿ ಇರಿಸುವಂತೆ ಗೂಗಲ್ ನೀಡುವ ಸಲಹೆ ಪಾಲನೆ ಮಾಡಿದ ಬಳಿಕವೂ ನೀವು ಇಂಟರ್ನೆಟ್‌ನಲ್ಲಿ ಬ್ರೌಸ್ ಮಾಡುವ ಎಲ್ಲ ಬಗೆಯ ವಿಚಾರಗಳನ್ನೂ ಗೂಗಲ್ ತಿಳಿದಿರುತ್ತದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
ಬಳಕೆದಾರರ ಬ್ರೌಸಿಂಗ್ ಮಾದರಿ ಖಾಸಗಿಯಾಗಿದ್ದರೂ ಅದರ ದತ್ತಾಂಶಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಗೂಗಲ್, ತನ್ನ ಬಳಕೆದಾರರಿಗೆ ಮಾಹಿತಿ ನೀಡಿಲ್ಲ ಎಂದು ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಧೀಶೆ ಲಕ್ಕಿ ಕೊಹ್ ಹೇಳಿದ್ದಾರೆ.