ನವದೆಹಲಿ: ಕುಡುಕರು ಎಷ್ಟೇ ವಿಮಾ ಹಣವನ್ನು ಕೂಡಿಟ್ಟರೂ, ಅವರೇನಾದರೂ ಕುಡಿದು ಕುಡಿದು ಮೃತಪಟ್ಟರೆ, ಯಾವುದೇ ಕಾರಣಕ್ಕೂ ಅವರ ಕುಟುಂಬದವರಿಗೆ ವಿಮೆ ಹಣ ಸಂದಾಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅತಿಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಸತ್ತ ವ್ಯಕ್ತಿಯೊಬ್ಬನ ಕುಟುಂಬಸ್ಥರು ತಮಗೆ ವಿಮೆ ಹಣ ನೀಡಲು ವಿಮಾ ಸಂಸ್ಥೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿದೆ.
ಅಪಘಾತದಿಂದ ಮೃತಪಟ್ಟರೆ ಇಲ್ಲವೇ ಅಪಘಾತ ಸಂಭವಿಷಿದಾಗ ಅಂಥ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ಆತನ ಕುಟುಂಬಸ್ಥರು ವಿಮೆ ಹಣ ಪಡೆಯಬಹುದು. ಆದರೆ ಹಾಗೆಯೇ ಕುಡಿದು ಕುಡಿದು ಸತ್ತರೆ ವಿಮೆ ಹಣಕ್ಕೆ ಅವರು ಅರ್ಹರಲ್ಲ ಎಂದಿದೆ ಕೋರ್ಟ್.
1997ರ ಏಪ್ರಿಲ್‌ನಲ್ಲಿ ಶಿಮ್ಲಾ ಜಿಲ್ಲೆಯ ಚೌಪಾಲ್‌ನ ರಾಜ್ಯ ಅರಣ್ಯ ನಿಗಮದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅತಿಯಾದ ಮದ್ಯ ಸೇವನೆ ಸಾವಿಗೆ ಕಾರಣವೆಂಬ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಮೊರೆ ಹೋಗಿದ್ದರು. ಆದರೆ ಅಲ್ಲಿ ವಿಮೆ ನೀಡಲಾಗದು ಎಂದು ಆದೇಶಿಸಲಾಗಿತ್ತು. ಈ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತನಗೌಡರ್ ಮತ್ತು ವಿನೀತ್ ಸರಣ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಇಂಥ ಪ್ರಕರಣದಲ್ಲಿ ವಿಮೆ ಹಣ ಸಿಗುವುದಿಲ್ಲ ಎಂದಿದೆ ಪೀಠ.
ಇದಕ್ಕೆ ಕಾರಣ ಕೊಟ್ಟಿರುವ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಸಾವು ಆಕಸ್ಮಿಕವಲ್ಲ. ಕುಡಿದು ಕುಡಿದು ಸತ್ತ ಕಾರಣ, ಇಂಥ ಪ್ರಕರಣಗಳಲ್ಲಿ ಸತ್ತವರ ಪ್ರಾಣಹಾನಿಯನ್ನು ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಬಾಧ್ಯತೆಯಿಲ್ಲ ಎಂದು ಹೇಳಿದೆ.