ತಿರುವನಂತಪುರಂ: ಕೇರಳದಲ್ಲಿ ಚುನಾವಣಾ ಕಣದ ರಂಗೇರಿದೆ. ಎಲ್ಲ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಬಿಜೆಪಿ ಪರ ಪ್ರಚಾರ ಮಾಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇರಳಕ್ಕೆ ಭೇಟಿ ನೀಡಿದ್ದು, ರಾಜ್ಯದ ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ.
ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಶಬರಿಮಲೆ ದೇವಾಲಯದ ಸಂಪ್ರದಾಯ ಮತ್ತು ಆಚರಣೆಗಳ ರಕ್ಷಣೆಗಾಗಿ ಹೊಸ ಕಾನೂನೊಂದನ್ನು ತರುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಬಹುಮತ ನಮಗೆ ಬರಬೇಕು. ಅದಕ್ಕಾಗಿ ನಾವು ಸಕಲ ಪ್ರಯತ್ನ ಮಾಡಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಬರಿಮಲೆ ಕಾನೂನನ್ನು ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲೂ ತಿಳಿಸಲಾಗಿದೆ.
ಕೇರಳದ 14 ಜಿಲ್ಲೆಗಳ 140 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.