ಕುಂಬಳೆ: ಗಡಿನಾಡು ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರವು ಹಲವು ವರ್ಷಗಳಿಂದ ಆರ್ಥಿಕವಾಗಿ ನೆರವಾಗುತ್ತಿದೆ. ಆದರೆ ಈ ಧನಸಹಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಂಘಟನೆಗಳು ಬಹಳ ಕಡಿಮೆ. ಸಿರಿಚಂದನ ಕನ್ನಡ ಯುವ ಬಳಗ(ರಿ.) ಕಾಸರಗೋಡು ಸಂಸ್ಥೆಗೆ ಯಕ್ಷಗಾನ ನಾಟ್ಯ ತರಬೇತಿ ಶಿಬಿರಕ್ಕಾಗಿ ಅಕಾಡೆಮಿ ನೀಡಿದ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯರಾದ ಶ್ರೀ ದಾಮೋದರ ಶೆಟ್ಟಿ ನುಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ದಲ್ಲಿ ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ನೇತೃತ್ವದಲ್ಲಿ ಸೂರಂಬೈಲು ಗಣೇಶ ಮಂದಿರದಲ್ಲಿ ಎರಡು ತಿಂಗಳುಗಳ ಕಾಲ ನಡೆದ ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಮಧುರೈ ಕಾಮರಾಜ ವಿಶ್ವವಿದ್ಯಾಲಯ ದ ವಿಶ್ರಾಂತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ “ಹೊರನಾಡಿನಲ್ಲಿ ನಡೆಯುವಷ್ಟು ಕನ್ನಡ ಕೆಲಸಗಳು ಒಳನಾಡುಗಳಲ್ಲಿ ನಡೀತಿಲ್ಲ. ಹಿಂದೆ ಯಕ್ಷಗಾನದಲ್ಲಿ ಪಾಲ್ಗೊಳ್ಳುವವರನ್ನು, ಯಕ್ಷಗಾನ ನೋಡಲು ಹೋಗುವವರನ್ನು ಕೀಳಾಗಿ ನೋಡಲಾಗುತ್ತಿತ್ತು. ಆದರೆ ಇಂದು ಆ ಸಂದರ್ಭ ಬದಲಾಗಿದೆ. ಉನ್ನತ ಹುದ್ದೆಯಲ್ಲಿ ಇರುವವರೂ ಹವ್ಯಾಸಿ ಕಲಾವಿದರಾಗಿದ್ದಾರೆ. ಇದು ಯಕ್ಷಗಾನದಂತಹ ಕಲೆಯ ಉಳಿವಿನ ದೃಷ್ಟಿಯಿಂದ ಕಾಲಮಾನದ ಅನಿವಾರ್ಯತೆಗಳಲ್ಲಿ ಒಂದು ಎಂದರು. ಯಕ್ಷಗಾನದಲ್ಲೂ ಪೌರಾಣಿಕ ಪಾತ್ರಗಳ ಮರುಸೃಷ್ಟಿ ನಡೆಯುತ್ತಿದೆ. ಯಕ್ಷಗಾನ ಪ್ರಸಂಗ ಕೃತಿಗಳ ಆಧಾರದಲ್ಲಿ ನಾಟಕ, ಕವಿತೆ, ಕಾದಂಬರಿ ರಚನೆ ನಡೆಯುತ್ತಿವೆ. ಪುರಾಣಗಳಲ್ಲಿ ಇಲ್ಲದ ಎಷ್ಟೋ ಪಾತ್ರಗಳು ಯಕ್ಷಗಾನದಲ್ಲಿ ಇಂದು ಹೊಸತಾಗಿ ಸೇರ್ಪಡೆಗೊಂಡಿದ್ದು ಶ್ರೋತೃಗಳು ಅದನ್ನು ಸ್ವೀಕರಿಸಿದ್ದಾರೆ. ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಇನ್ನೋರ್ವ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ “ಅವಕಾಶ ಅರ್ಹತೆಯ ದೃಷ್ಟಿಯಿಂದ ದೊರೆಯಬೇಕು. ಯಕ್ಷಗಾನ ಶಿಬಿರದಲ್ಲಿ ಎಲ್ಲಾ ವರ್ಗದ ಎಲ್ಲಾ ವಲಯದ ಆಸಕ್ತ ಕಲಾಭಿಮಾನಿಗಳಿಗೆ ಅವಕಾಶ ದೊರೆತಿದ್ದು ಕಾಸರಗೋಡಿನ ಕನ್ನಡ ಚಟುವಟಿಕೆಗಳಿಗೆ ದೊರೆತ ಅನುದಾನಕ್ಕೆ ಹೇಗೆ ಸರಿಯಾದ ನ್ಯಾಯ ಒದಗಿಸಬಹುದು ಎನ್ನುವುದಕ್ಕೆ ಈ ಶಿಬಿರ ಒಂದು ಉತ್ತಮ ನಿದರ್ಶನ. ಶಿಬಿರದ ಭಾಗವಾಗಿ ಸ್ಮರಣ ಸಂಚಿಕೆ ಹೊರತರುತ್ತಿರುವುದರಿಂದ ದಾಖಲೀಕರಣ ಕಾರ್ಯವೂ ಸಮರ್ಪಕವಾಗಿ ಆಗಲಿದೆ. ಬಹುರೂಪಿ ಯಕ್ಷಗಾನದಿಂದ ಸೃಜನಶೀಲ ಕೃತಿಗಳ ಹುಟ್ಟು ಸಾಧ್ಯವಿದೆ. ಅದು ಕಾಸರಗೋಡಿನವರಿಂದಲೇ ಆಗಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಭಾಗವಹಿಸಿದ ಹೇರೂರು ಶಾಲಾ ಮುಖ್ಯೋಪಾಧ್ಯಾಯ ವಸಂತ ಕುಮಾರ್ ಚೇರಾಲು “ಒಂದು ಸಭಾಂಗಣ ಸಾಂಸ್ಕøತಿಕ ವೇದಿಕೆ ಆದಾಗಲೇ ಅದು ಜನಸಾಮಾನ್ಯರನ್ನು ತಲಪುವುದಕ್ಕೆ ಸಾಧ್ಯ. ಶಿಸ್ತುಬದ್ದವಾಗಿ ಸಮಾಜದಲ್ಲಿ ಬದುಕುವುದಕ್ಕೆ ಯಕ್ಷಗಾನ ಅತೀ ಅಗತ್ಯ. ಈ ಶಿಬಿರ ಅದಕ್ಕೆ ಪ್ರೇರಣೆಯಾಗಿದೆ ಎಂದರು. ಸಾಹಿತಿ ಸ್ನೇಹಲತಾ ದಿವಾಕರ್ ಮಾತನಾಡಿ “ಯಕ್ಷಗಾನ ಎಂಬ ಸಮುದ್ರದಿಂದ ಬೊಗಸೆ ನೀರು ತೆಗೆದು ರುಚಿ ತೋರಿಸುವ ಕೆಲಸವನ್ನು ಶಿಬಿರವು ಮಾಡಿದೆ. ಯಕ್ಷಗಾನದ ಬಗೆಗೆ ಆಸಕ್ತಿ ಮೂಡುವುದಕ್ಕೆ ಈ ರುಚಿಯು ಸಹಾಯಕವಾಗಲಿ ಎಂದು ಶುಭ ಹಾರೈಸಿದರು.
ಭರತನಾಟ್ಯ ಕಲಾವಿದೆ, ಉಪನ್ಯಾಸಕಿ ಅಕ್ಷತಾ ಅಭಿಷೇಕ್, ನಾಟ್ಯಗುರು ದಿವಾಣ ಶಿವಶಂಕರ ಭಟ್, ಸಚಿನ್ ಎಂ. ಕುದ್ರೆಪ್ಪಾಡಿ, ಶಿಬಿರಾರ್ಥಿಗಳಾದ ಸೌಮ್ಯಾಶ್ರೀ, ವಿನಯ ಚಿಗುರುಪಾದೆ, ಶ್ರದ್ಧಾ, ಅನಘಾ ಲಕ್ಷ್ಮೀ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಯಕ್ಷಗಾನ ಕಲಿಯುವುದೆಂದರೆ ಸಂಸ್ಕಾರ ಕಲಿತ ಹಾಗೆ. ಶಿಬಿರದಿಂದ ಶಿಬಿರಾರ್ಥಿಗಳು ಸಹಕಾರ, ಸಹಬಾಳ್ವೆಯನ್ನು ಕಲಿತಿದ್ದಾರೆ. ಒಂದು ಕಾರ್ಯಕ್ರಮವನ್ನು ಸಂಘಟಿಸುವಾಗ ಹಲವಾರು ಅಡೆತಡೆಗಳು ಉಂಟಾಗುತ್ತವೆ. ಆದರೆ ಮಾಡುವ ಕಾರ್ಯದಲ್ಲಿ ಪ್ರೀತಿ, ಪರಿಶ್ರಮ, ಪ್ರಾಮಾಣಿಕತೆಗಳಿದ್ದಾಗ ಎಲ್ಲವನ್ನೂ ಜಯಿಸಿ ಯಶಸ್ವಿಯಾಗುವುದಕ್ಕೆ ಸಾದ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಬಿರದ ಸ್ಮರಣ ಸಂಚಿಕೆ ಧೀಂಗಿಣ ವನ್ನು ಯಕ್ಷಗಾನ ಕಲಾವಿದ ಬಾಲಕೃಷ್ಣ ಮವ್ವಾರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು. ಶಿಬಿರದ ಯಶಸ್ವಿಗೆ ಕಾರಣರಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ದಾಮೋದರ ಶೆಟ್ಟಿ, ಯೋಗೀಶ್ ರಾವ್ ಚಿಗುರುಪಾದೆ, ನಾಟ್ಯಗುರು ದಿವಾಣ ಶಿವಶಂಕರ ಭಟ್, ಶಿಬಿರ ನಡೆಸುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಗಣೇಶ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮುಖ್ಯೋಪಾಧ್ಯಾಯ ವಸಂತ ಕುಮಾರ ಚೇರಾಲು ಹಾಗೂ ಬಾಲಕೃಷ್ಣ ಮವ್ವಾರು ಇವರನ್ನು ಶಾಲು ಹೊದೆಸಿ ಗೌರವಿಸಲಾಯಿತು.
ಶಿಬಿರದ ಸಂಚಾಲಕ ಕಾರ್ತಿಕ್ ಪಡ್ರೆ ಸ್ವಾಗತಿಸಿ ಸಹಸಂಚಾಲಕಿ ಸುಶ್ಮಿತಾ ಆರ್ ಧನ್ಯವಾದ ಹೇಳಿದರು. ಬಳಗದ ಪದಾಧಿಕಾರಿ ಸುಜಿತ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ಬಳಗದ ಸದಸ್ಯರಾದ ಸುನೀತಾ ಮಯ್ಯ, ಅನುರಾಧ ಕಲ್ಲಂಗೂಡ್ಲು ಪ್ರಾರ್ಥನೆ ಹಾಡಿದರು. ಸಿರಿಚಂದನ ಕನ್ನಡ ಯುವ ಬಳಗದ ಪದಾಧಿಕಾರಿಗಳು, ಶಿಬಿರಾರ್ಥಿಗಳ ಹೆತ್ತವರು ಹಾಗೂ ಸಹೃದಯೀ ಕಲಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನದ ಹಿರಿಯ ಕಲಾವಿದ ಬಾಲಕೃಷ್ಣ ಮವ್ವಾರು ಅವರಿಂದ 'ಯಕ್ಷಗಾನದಲ್ಲಿ ಹಾಸ್ಯನಿರೂಪಣೆ' ಎಂಬ ಎಂಬ ವಿಷಯದಲ್ಲಿ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯು ಶಿಬಿರದ ಕೊನೆಯ ದಿನ ನಡೆಯಿತು.